ಬೆಂಗಳೂರು, ಆ 27 ಬಿಜೆಪಿ ನಾಯಕರು ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು, ಯಾರು ಮೇಲೆ ಯಾರು ಕೆಳಗೆ ಎಂದು ಅಧಿಕಾರ ಹಂಚಿಕೆಯ ಕಿತ್ತಾಟದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಟೀಕಿಸಿದ್ದಾರೆ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಮಂತ್ರಿ ಮಂಡಲ ರಚನೆ ಮಾಡಲು 26 ದಿನ ತೆಗೆದುಕೊಂಡಿದ್ದಾರೆ. 4-5 ದಿನಗಳು ಖಾತೆ ಹಂಚಿಕೆಯಲ್ಲಿಯೇ ಮುಗಿದಿದೆ. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಡಳಿತ ಹೇಗೆ ನಡೆಸಬೇಕೆಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಜನಪರ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದು, ಅವರಿಗಾಗಿರುವ ತೊಂದರೆಗಳು, ಸಂತ್ರಸ್ತರು ಎದುರಿಸುತ್ತಿರುವ ಕಷ್ಟಗಳನ್ನು ನೋಡುವವರೇ ಇಲ್ಲದಂತಾಗಿದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿಯಿದ್ದು, ಜನರು ಕಂಗಾಲಾಗಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಬಿಜೆಪಿ ನಾಯಕರಿಗೆ, ಸಚಿವರಿಗೆ ಅಧಿಕಾರ ಹಂಚಿಕೆಯ ಗೊಂದಲ, ಕಿತ್ತಾಟವೇ ಹೆಚ್ಚಾಗಿದೆಯೇ ಹೊರತು ರಾಜ್ಯದ ಜನರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹೆಸರನ್ನು ಸದಾ ಉಚ್ಚರಿಸುವ ಯಡಿಯೂರಪ್ಪ, ಈಗ ಏಕೆ ರೈತರತ್ತ ಗಮನ ಹರಿಸುತ್ತಿಲ್ಲ ಎಂದ ಖರ್ಗೆ ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.