ಬಿಜೆಪಿ ಸಂಸ್ಥಾಪನಾ ದಿನಕ್ಕಾಗಿ ಬಿಜೆಪಿ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸುತ್ತಿದೆ: ಕುಮಾರಸ್ವಾಮಿ

ಬೆಂಗಳೂರು, ಏ 5, ಜಗತ್ತು  ಕೊರೋನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್  ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ಕರೆ ನೀಡಿರುವ ಜ್ಯೋತಿ ಬೆಳಗುವಿಕೆಯನ್ನು  ಪ್ರಶ್ನಿಸಿದ್ದಾರೆ. ಏ. 6 ಬಿಜೆಪಿಯ ಸಂಸ್ಥಾಪನಾ ದಿನವಾಗಿದ್ದು, ಪಕ್ಷದ ಸಂಸ್ಥಾಪನಾ ದಿನ ಆಚರಿಸಲು ಕೊರೋನ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೇ? ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.ದೇಶದ  ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ  ಏಪ್ರಿಲ್ 5ನ್ನೇ ಆಯ್ದುಕೊಂಡದ್ದಕ್ಕೆ ಯಾವ ವೈಜ್ಞಾನಿಕ, ವೈಚಾರಿಕ ಕಾರಣ‌ ಇದೆ  ಎಂಬುದನ್ನು ಸ್ಪಷ್ಟ ಪಡಿಸಬೇಕು. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ  ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ?  ಎಂದು ಕುಮಾರಸ್ವಾಮಿ ಬಿಜೆಪಿಯನ್ನು ಕುಟುಕಿದ್ದಾರೆ.ಬಿಜೆಪಿ ಸಂಸ್ಥಾಪನಾ ದಿನದ  ಸಂಭ್ರಮೋತ್ಸವವನ್ನು ಕೊರೋನ ಸಂಕಷ್ಟದ ದಿನಗಳಲ್ಲಿ ನೇರಾನೇರ ಆಚರಿಸಲು ಹಿಂಜರಿದ ಬಿಜೆಪಿ  ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು  ಮೆರೆಯುತ್ತಿದೆಯೇ ಎಂದು ಟ್ವೀಟ್ ಮೂಲಕ ಸೂಚ್ಯವಾಗಿ ತಿವಿದಿದ್ದಾರೆ.