ಹರ್ಯಾಣ, ಮಹಾರಾಷ್ಟ್ರದಲ್ಲಿ ಪ್ರಬಲ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಿದೆ: ಬಿಜೆಪಿ

ನವದೆಹಲಿ, ಅ.24:     ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿನ ಮುನ್ನಡೆ ಮತ್ತು ಫಲಿತಾಂಶಗಳನ್ನು ಗಮನಿಸುವಾಗ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ತನ್ನ ನೆಲೆ ಗಟ್ಟಿಗೊಳಿಸಿ, ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂಬುದು ಸ್ಪಷ್ಟವಾಗಿದೆ. "2014 ಕ್ಕಿಂತ ಮೊದಲು, ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿರಲಿಲ್ಲ ....ಆದರೆ ಎರಡೂ ರಾಜ್ಯಗಳಲ್ಲಿ ನಮ್ಮ ಮತ ಹಂಚಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಹೇಳಿದರು. ಹರಿಯಾಣದಲ್ಲಿ, 2014ಕ್ಕಿಂತ ಮೊದಲು, ಬಿಜೆಪಿಯ ಮತಗಳ ಪಾಲು ಶೇಕಡಾ 10ರಷ್ಟಿತ್ತು, ಆದರೆ ಅದು ಶೇಕಡಾ 32 ರವರೆಗೆ ಏರಿಕೆಯಾಗಿದೆ, ಇನ್ನೂ ಅದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಅದೇ ರೀತಿ, ಮಹಾರಾಷ್ಟ್ರದಲ್ಲಿ, ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಬಿಜೆಪಿ, ಮುನ್ನಡೆಯಲ್ಲಿದ್ದು, ಇದುವರೆಗೆ ಶೇಕಡಾ 27ರಷ್ಟು ಮತ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೊಹ್ಲಿ, ತಮ್ಮ ಪಕ್ಷವು ಯಾವಾಗಲೂ ಜಾತಿ ಸಮೀಕರಣಗಳ ರಾಜಕೀಯವನ್ನು ಒಪ್ಪುವುದಿಲ್ಲ. ಅದರ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿ ವಿಷಯಗಳ ಮೇಲೆ ಅಪಾರ ಪ್ರಮಾಣದ ಭರವಸೆ ಇಟ್ಟಿದೆ ಎಂದರು. "ನಾವು ಈ ಮಾರ್ಗವನ್ನು ಅನುಸರಿಸುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ರಾಜ್ಯ ನಾಯಕರನ್ನು ಮೂಲೆಗುಂಪು  ಮಾಡಿದ್ದರು ಎಂಬ ಆರೋಪವನ್ನು ಅವರು ನಿರಾಕರಿಸಿದರು. "ನಮ್ಮ ಪಕ್ಷದಲ್ಲಿ ಯಾವುದೇ ವೈಯಕ್ತಿಕ ಸಂಘರ್ಷವಿಲ್ಲ .... ಎಲ್ಲರೂ ಪಕ್ಷದ ಸಿದ್ಧಾಂತ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಬದ್ಧರಾಗಿದ್ದಾರೆ" ಎಂದು ಕೊಹ್ಲಿ ಹೇಳಿದರು.