ನವದೆಹಲಿ, ಅ 9: ನೀವು ಪಾಕಿಸ್ತಾನಿಯರೇ? ನೀವು ಭಾರತೀಯರಾಗಿದ್ದರೇ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ ಎಂದು ಹರಿಯಾಣದ ಆದಂಪುರ ಬಿಜೆಪಿ ಅಭ್ಯರ್ಥಿ ಹಾಗೂ ಟಿಕ್ಟಾಕ್ ಸ್ಟಾರ್ ಸೋನಾಲಿ ಫೋಗಾಟ್ ಚುನಾವಣಾ ಸಭೆಯಲ್ಲಿ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ಸಭೆಯಲ್ಲಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು, ಈ ವೇಳೆ ಕೆಲವು ಜನರ ಗುಂಪು ಭಾರತ್ ಮಾತಾ ಕೀ ಜೈ ಹೇಳದೇ ಮೌನ ವಹಿಸಿದ್ದನ್ನು ಕಂಡು ಕೆರಳಿದ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಎಂದು ಸಭಿಕರನ್ನು ಪ್ರಶ್ನೆ ಮಾಡಿದ್ದಾರೆ .
ಆದಮ್ಪುರ ಕ್ಷೇತ್ರದ ಬಲ್ಸಾಮಂದ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಸೋನಾಲಿ ಫೋಗಾಟ್ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಪದೇ ಪದೇ ಕೂಗುತ್ತಿದ್ದರು. ಆದರೆ ಕೆಲವರು ಘೋಷಣೆ ಕೂಗದೇ ಹಾಗೆ ನಿಂತಿದ್ದನ್ನು ಗಮನಿಸಿದ ಅವರು ಭಾರತ್ ಮಾತಾ ಕೀ ಜೈ ಎನ್ನದ ನೀವು ಭಾರತೀಯರಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಯಾರು ಭಾರತ್ ಮಾತಾ ಕೀ ಜೈ ಎಂದು ಕೂಗುವುದಿಲ್ಲವೋ ಅವರ ಮತಗಳಿಗೆ ಮಾನ್ಯತೆಯಿರುವುದಿಲ್ಲ ಎಂದು ಆಕ್ರೋಶ ಹೊರಹಾಕಿ ಅವಿವೇಕತನ ಪ್ರದರ್ಶಿಸಿಕೊಂಡಿದ್ದಾರೆ.
ಸೋನಾಲಿ ಸಭೆಯಲ್ಲಿ ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಂತರ ನಟಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ, ಭಾರತ್ ಮಾತಾ ಕೀ ಜೈ ಹೇಳದ ಕೆಲವರು ಸೋನಾಲಿ ಬಳಿ ಬಂದು ಕ್ಷಮೆಯಾಚಿಸಿದರು ಎಂದೂ ವರದಿಯಾಗಿದೆ.