ಮೈಸೂರು, ಆ 20 ರಾಜ್ಯದ ನೆರೆಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಜ್ಯ ಬಿಜೆಪಿ ಸಂಸದರ ನಿಯೋಗ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 21 ಜಿಲ್ಲೆಗಳು ಮಳೆ ಹಾನಿಗೆ ತುತ್ತಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತರು ಸೇರಿದಂತೆ ಸಂತ್ರಸ್ತರು ನೆರೆಯಿಂದ ನಲಗುವಂತಾಗಿದೆ. ಜನರು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.ಬಿಜೆಪಿಯ 26 ಸಂಸದರು ಕೂಡಲೆ ಪ್ರಧಾನಿ ಬಳಿಗೆ ಹೋಗಿ ನೆರೆ ಪರಿಹಾರಕ್ಕೆ ಒತ್ತಾಯಿಸಬೇಕು. ಇಲ್ಲದಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರಾದರೂ ಇದೂವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಸಕರ್ಾರ ಆದಷ್ಟು ಬೇಗ ನೆರೆ ಸಂತ್ರಸ್ಥರ ನೆರವಿಗೆ ನಿಲ್ಲಬೇಕು. ಹೆಚ್ಚಿನ ಅನುದಾನ ಬಿಡುಗಡೆಮಾಡಬೇಕು ಎಂದರು.
ರಾಜ್ಯ ಸರ್ಕಾರ ಗಂಜಿ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ ಮಾತ್ರ ಅನುದಾನ ನೀಡಲು ಮುಂದಾಗಿರುವ ನಿರ್ಧಾರವನ್ನು ಕೈಬಿಡಬೇಕು. ಶೇ.50 ರಷ್ಟು ನೆರೆ ಸಂತ್ರಸ್ತರು ತಮ್ಮ ಸಂಬಂಧಿಕರ, ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸಂತ್ರಸ್ತರಲ್ಲಿ ತಾರತಮ್ಯ ಮಾಡದೇ ರಾಜ್ಯ ಸರ್ಕಾರ ಎಲ್ಲರ ನೆರವಿಗೂ ಮುಂದಾಗಬೇಕು ಎಂದು ಮನವಿ ಮಾಡಿದರು.