ಬೆಂಗಳೂರು, ಆಗಸ್ಟ್ 8 ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರಾಜ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಕ್ಷಮೆ ಕೋರಿದ್ದಾರೆ.
ಇದರೊಂದಿಗೆ ಇಬ್ಬರ ನಡುವಿನ ಬಿಕ್ಕಟ್ಟು ಅಂತ್ಯಗೊಂಡಿದೆ.
'ನಿಮ್ಮ ಹಾಗೂ ನಿಮ್ಮ ಕುಟುಂಬದವರ ವಿರುದ್ಧ ಅನಗತ್ಯ ಮತ್ತು ನೋವುಂಟು ಮಾಡುವ ಲೇಖನ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ ಎಂದು ಪ್ರತಾಪ್ ಸಿಂಹ, ಪ್ರಕಾಶ್ ರಾಜ್ ಅವರಿಗೆ ಟ್ವೀಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಕ್ಷಮೆಯಾಚನೆಗೆ ಒಪ್ಪಿರುವ ಪ್ರಕಾಶ್ ರಾಜ್, ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಕೊಳಕು ಹೇಳಿಕೆ ಮೂಲಕ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನದಿಂದ ದೂರವಿರುವಂತೆ ಸಲಹೆ ಮಾಡಿದ್ದಾರೆ.
'ನಮ್ಮ ಸಿದ್ಧಾಂತದೊಂದಿಗೆ ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ಸಾಮಾಜಿಕ ಮಾಧ್ಯಮದಲ್ಲಿ ನಾವು ಕೊಳಕು ಹೇಳಿಕೆ ಮೂಲಕ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಾರದು. ಅದೂ ನಾವಿಬ್ಬರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿರುವುದರಿಂದ ಉತ್ತಮವಾದುದನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ.' ಎಂದು ಪ್ರಕಾಶ್ ರಾಜ್ ಪ್ರತಾಪ್ ಸಿಂಹ ಅವರಿಗೆ ಕಿವಿಮಾತು ಹೇಳಿದ್ದಾರೆ.