ನಾಗ್ಪುರ, ಏಪ್ರಿಲ್ 6,ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಭಾನುವಾರ ತಮ್ಮ ಜನ್ಮದಿನದಂದು ತಮ್ಮ ನಿವಾಸದಲ್ಲಿ ಜನರಿಗೆ ಪಡಿತರ ವಿತರಿಸುವ ಮೂಲಕ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ಉಪ-ವಿಭಾಗೀಯ ಅಧಿಕಾರಿ (ಎಸ್‌ಡಿಒ) ಹರೀಶ್ ಧರ್ಮಿಕ್ ದೃಢಪಡಿಸಿದ್ದು, ಬಿಜೆಪಿ ಶಾಸಕ ದಾದರಾವ್ ಕೆಚೆ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಕೊರೋನವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಶಾಸಕರು ಜಿಲ್ಲಾಡಳಿತದಿಂದ ಯಾವುದೇ ಅನುಮತಿಯನ್ನು ಪಡೆಯದೆ ಹುಟ್ಟುಹಬ್ಬ ಆಚರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಅಲ್ಲಿ ಕನಿಷ್ಠ ನೂರು ಜನರು ಶಾಸಕರ ನಿವಾಸದ ಹೊರಗೆ ಉಚಿತ ಧಾನ್ಯಗಳನ್ನು ಪಡೆಯಲು ಒಟ್ಟುಗೂಡಿದ್ದರು. ತಕ್ಷಣ ಅವರೆಲ್ಲರನ್ನು ಪೊಲೀಸರು ಚದುರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆದಾಗ್ಯೂ, ಈ ಘಟನೆಯನ್ನು ಶಾಸಕರು ನಿರಾಕರಿಸಿದ್ದಾರೆ. ಇದು ಅವರ ವಿರೋಧಿಗಳು ತಮ್ಮ ವಿರುದ್ಧದ ರಾಜಕೀಯ ಪಿತೂರಿ ಎಂದು ದೂರಿದ್ದಾರೆ.