ನಾನು ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿ; ಸಿ.ಟಿ.ರವಿ

ಬೆಂಗಳೂರು, ಆ 27  ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿರಲಿಲ್ಲ. ಇದೇ ಖಾತೆ ಬೇಕು ಎಂದು ಯಾರನ್ನೂ ಕೇಳಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.  ಪಕ್ಷ ನನಗೆ ಹಲವಾರು ಜವಾಬ್ದಾರಿಗಳನ್ನು ನೀಡಿದೆ. ಹಲವು ಹಂತಗಳಲ್ಲಿ ಹತ್ತಾರು ಹುದ್ದೆಗಳನ್ನು ನೀಡಿದೆ, ಪಕ್ಷ ನನಗೆ ತಾಯಿ ಸಮಾನ. ನಾನು ಸ್ವಾಭಿಮಾನಿ. ನಾನು ಇರುವುದು ಬಿಜೆಪಿಯಲ್ಲಿ ಸಾಯುವುದು ಕೂಡ ಬಿಜೆಪಿಯಲ್ಲೇ. ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟಪಡಿಸಿರುವ ಸಿ.ಟಿ. ರವಿ, ಇಂದು ನಡೆಯುವ ನಳೀನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಎಲ್ಲ ಗೊಂದಲಗಳಿಗೂ ತೆರೆ ಎಳೆಯುತ್ತೇನೆ. ಪಕ್ಷ ನನಗೆ ಹತ್ತಾರು ಜವಾಬ್ದಾರಿ ಕೊಟ್ಟಿದೆ. ನಾನು ಬಂಡಾಯಗಾರನಲ್ಲ, ಸ್ವಾಭಿಮಾನಿ. ನಾನು ಯಾವತ್ತೂ ಪಕ್ಷ ನಿಷ್ಠೆ ಬಿಟ್ಟು ನಡೆದುಕೊಂಡಿಲ್ಲ. ಮಂತ್ರಿಯಾಗಬೇಕೆಂದು ಯಾರಲ್ಲೂ ಕೇಳಿಲ್ಲ. ಕೆಲವು ಸಂಗತಿಯನ್ನು ಕಾಲವೇ ನಿರ್ಣಯಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 1988ರಲ್ಲಿ ಒಂದು ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನನಗೆ ಭಾರತೀಯ ಜನತಾ ಪಕ್ಷ ಅದೆಷ್ಟು ಹುದ್ದೆ ನೀಡಿದೆ,  ನನ್ನ ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಯಾರು ಇರಲಿಲ್ಲ. ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ ಬಿಜೆಪಿ ಎಂದು ಟ್ವೀಟ್ ಮಾಡಿದ್ದಾರೆ. ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿ ಎಂದು ಮತ್ತೊಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ. ನಾನು ಸರ್ಕಾರಿ ಕಾರನ್ನು ವಾಪಾಸ್ ಕಳಿಸಿದ್ದೇನೆ. ಅಂದಮಾತ್ರಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅರ್ಥವಲ್ಲ. ಪಕ್ಷದ ಇತಿಮಿತಿಗಳು ಏನು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.   ಬಿಜೆಪಿ ಪಕ್ಷ ನಮಗೆ ತಾಯಿ ಇದ್ದ ಹಾಗೆ. ಪಕ್ಷಕ್ಕೆ ಹಾನಿಯಾಗುವ ಯಾವುದೇ ತೀರ್ಮಾನ ಯಾರೂ ತೆಗೆದುಕೊಳ್ಳಬಾರದು. ನನಗೆ ಯಾವ ಅಸಮಾಧಾನವೂ ಇಲ್ಲ. ಬಂಡಾಯವೂ ಇಲ್ಲ, ಒತ್ತಡ ಕೂಡ ಇಲ್ಲ. ನಾನು ಒತ್ತಡದಲ್ಲಿ ಇರುತ್ತೇನೆ ಎಂದು ನನ್ನನ್ನು ನೋಡಲು ಬಂದ ಸ್ನೇಹಿತರು ನಾನು ಆರಾಮಾಗಿ ಇರುವುದನ್ನು ನೋಡಿ ಅವರು ಖುಷಿಯಾಗಿ ಹೋಗಿದ್ದಾರೆ. ನಾನು ಅಧಿಕಾರಕ್ಕಾಗಿ ಮಂಡಿಯೂರುವವನಲ್ಲ. ಜನರ ಪ್ರೀತಿ ಗಳಿಸಲು ಅಧಿಕಾರವೇ ಬೇಕೆಂದೇನೂ ಇಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕೈತಪ್ಪಿದ್ದರಿಂದ ಸಿ.ಟಿ.ರವಿ ಅಸಮಾಧಾನಗೊಂಡಿದ್ದಾರೆ ಎಂದು ಕೆಲವು ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾಗಿತ್ತು. ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅಯ್ಯೋ ಪಾಪ.  ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲಾ, ಜನಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ ಎಂದು ತಿಳಿಸಿದ್ದಾರೆ.