ರಣಜಿ ಟೂರ್ನಿ ಸೆಮಿಫೈನಲ್ಸ್ ನಲ್ಲಿ ಸೋತ ಕರುಣ್ ಪಡೆ, ಬಂಗಾಳ ಫೈನಲ್ ಗೆ
ರಣಜಿ ಟೂರ್ನಿ ಸೆಮಿಫೈನಲ್ಸ್ ನಲ್ಲಿ ಸೋತ ಕರುಣ್ ಪಡೆ, ಬಂಗಾಳ ಫೈನಲ್ ಗೆ BENGAL GETS INTO FINALS
Lokadrshan Daily
1/5/25, 5:36 PM ಪ್ರಕಟಿಸಲಾಗಿದೆ
ಕೋಲ್ಕತಾ, ಮಾ.3,ಮಾಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ ಅಮೋಘ ಸಂಘಟಿತ ಪ್ರದರ್ಶನ ನೀಡಿದ ಬಂಗಾಳ ತಂಡ ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಜಯ ಸಾಧಿಸಿ, 14ನೇ ಬಾರಿಗೆ ಟೂರ್ನಿಯ ಫೈನಲ್ ಗೆ ಪ್ರವೇಶ ಪಡೆದಿದೆ. 30 ವರ್ಷಗಳ ಕಾಲ ಮರೀಚಿಕೆ ಆಗಿದ್ದ ರಣಜಿ ಟ್ರೋಫಿ ಬರವನ್ನು ನೀಗಿಸಲು ಬಂಗಾಳ ತಂಡ ಪ್ಲಾನ್ ಮಾಡಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಮಬಲದ ಪ್ರದರ್ಶನ ನೀಡುತ್ತಿರುವ ಬಂಗಾಳ ತಂಡ, 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಬಂಗಾಳ 1938-39 ಹಾಗೂ 1989-90 ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲದೆ 11 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಮಂಗಳವಾರ ಮೂರು ವಿಕೆಟ್ ಗೆ 98 ರನ್ ಗಳಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 177 ಗೆ ಸರ್ವ ಪತನ ಹೊಂದಿತು. 174 ರನ್ ಗಳಿಂದ ಗೆದ್ದ ಬಂಗಾಳ ತಂಡ ಅಂತಿಮ ಪಂದ್ಯಕ್ಕೆ ಪ್ರವೇಶಿಸಿದೆ. ಕರ್ನಾಟಕದ ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಹಾಗೂ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವ ಹೊಂದಿರುವ ಮನೀಷ್ ಪಾಂಡೆ (0) ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ತಂಡಕ್ಕೆ ಸಂಕಷ್ಟಕ್ಕೆ ಸಿಲುಕಿತು. ಭಾರತ ತಂಡ ಪ್ರತಿನಿಧಿಸಿರುವ ಕೆ.ಎಲ್ ರಾಹುಲ್, ಹಾಗೂ ಕರುಣ್ ನಾಯರ್ ಸಹ ಭಾನುವಾರ ರನ್ ಬರ ಅನುಭವಿಸಿದ್ದರು. ವಿಕೆಟ್ ಕೀಪರ್ ಎಸ್.ಶರತ್ ಸಹ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ದೇವದತ್ 62 ಗಳಿಗೆ ಆಟ ಮುಗಿಸಿದರು. ಮುಕೇಶ್ ಕುಮಾರ್ ಅವರು ಎಸೆದ ಆಫ್ ಸೈಡ ಎಸೆತವನ್ನು ಕೆಣಕಿದ ದೇವದತ್ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಆಲ್ ರೌಂಡರ್ ಕೆ.ಗೌತಮ್ (22), ಅನುಭವಿ ಅಭಿಮನ್ಯು ಮಿಥುನ್ (38) ತಮ್ಮ ಕ್ಷಮತೆಗೆ ತಕ್ಕ ಆಟ ಪ್ರದರ್ಶಿಸಿದರೂ, ಕರ್ನಾಟಕ ಗೆಲುವಿನ ದಡ ಸೇರುವಲ್ಲಿ ಎಡವಿತು. ಪರಿಣಾಮ ಕರುಣ್ ಪಡೆ ಫೈನಲ್ ಗೆ ತಲುಪುವ ಕನಸು ಛಿದ್ರ ಗೊಂಡಿತು. ಪ್ರಸಕ್ತ ದೇಶಿಯ ಟೂರ್ನಿಗಳಾ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ ಮತ್ತೊಂದು ಪ್ರಶಸ್ತಿ ಎತ್ತುವ ಕನಸು ಕೈಗೂಡಲಿಲ್ಲ. ಸಂಕ್ಷಿಪ್ತ ಸ್ಕೋರ್ ಬಂಗಾಳ ಮೊದಲ ಇನ್ನಿಂಗ್ಸ್ 312 ಕರ್ನಾಟಕ ಮೊದಲ ಇನ್ನಿಂಗ್ಸ್ 122 ಬಂಗಾಳ ಎರಡನೇ ಇನ್ನಿಂಗ್ಸ್ 161 ಕರ್ನಾಟಕ ಎರಡನೇ ಇನ್ನಿಂಗ್ಸ್ 177 (ದೇವದತ್ ಪಡಿಕ್ಕಲ್ 62, ಕೆ.ಗೌತಮ್ 22, ಅಭಿಮನ್ಯು ಮಿಥುನ್ 38, ಮುಕೇಶ್ ಕುಮಾರ್ 61ಕ್ಕೆ 6, ಆಕಾಶ್ ದೀಪ್ 44ಕ್ಕೆ 2)