ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಒಪ್ಪಿಗೆ ನೀಡಲ್ಲ: ಅಖ್ತರ್

ಲಾಹೋರ್, ಜ 6,ಮುಂಬರುವ 2023 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಅಳವಡಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಯೋಜನೆಯನ್ನು ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ವಿರೋಧಿಸಿದ್ದಾರೆ.ಐದು ದಿನಗಳ ಟೆಸ್ಟ್ ಪಂದ್ಯದ ಸ್ವಾಭಾವಿಕ ಸ್ವರೂಪವನ್ನು ಇದೀಗ ಒಂದು ದಿನ ಕಡಿತಗೊಳಿಸಿ ನಾಲ್ಕ ದಿನಗಳಿಗೆ ಸೀಮಿತ ಮಾಡುವ ಐಸಿಸಿ ಯೋಜನೆಯನ್ನು ವಿಶ್ವದಾದ್ಯಂತ ಕ್ರಿಕೆಟ್ ದಿಗ್ಗಜರು ವಿರೋಧಿಸಿದ್ದಾರೆ. ಇದೀಗ ಈ ಪಟ್ಟಿಗೆ ಪಾಕಿಸ್ತಾನ ಮಾಜಿ ವೇಗಿ ಸೇರ್ಪಡೆಯಾಗಿದ್ದಾರೆ.ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಪ್ಪಿಗೆ ಹೊರತಾಗಿ ಐಸಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಯೋಜನೆಯನ್ನು ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಅಖ್ತರ್ ನಂಬಿದ್ದಾರೆ."ನಾಲ್ಕು ದಿನಗಳ ಟೆಸ್ಟ್ ಪಂದ್ಯ ವಾಡುವ ಯೋಜನೆ ಕಳಪೆಯಾಗಿದೆ. ಇದಕ್ಕೆ ಯಾರೂ ಆಸಕ್ತಿ ತೋರುವುದಿಲ್ಲ. ಬಿಸಿಸಿಯ ಅಧ್ಯಕ್ಷ ಸೌರವ್ ಗಂಗೂಲಿ ಬುದ್ದಿವಂತ ವ್ಯಕ್ತಿ. ಇದಕ್ಕೆ ಅವರು ಒಮ್ಮತ ಸೂಚಿಸುವುದಿಲ್ಲ. ಟೆಸ್ಟ್ ಕ್ರಿಕೆಟ್ ಅವನತಿಗೆ ಅವರು ಆಸ್ಪದ ನೀಡುವುದಿಲ್ಲ," ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಬಿಸಿಸಿಐ ಒಪ್ಪಿಗೆ ಇಲ್ಲದೆ ಐಸಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಯೋಜನೆಯನ್ನು ಪರಿಷ್ಕರಿಸುವ ಮಾತೇ ಇಲ್ಲ. ಪಾಕಿಸ್ತಾನ, ಭಾರತ ಹಾಗೂ ಶ್ರೀಲಂಕಾ ದೇಶಗಳಿಂದ ಜನರು ಇದಕ್ಕೆ ವಿರೋಧಿಸಬೇಕು. ನಮ್ಮ ದೇಶದ ಕ್ರಿಕೆಟ್ ದಿಗ್ಗಜರೂ ಈ ಯೋಜನೆ ವಿರುದ್ಧ ಧನಿ ಎತ್ತಬೇಕು," ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಬೇಡಿಕೆ ವಿರುದ್ಧ ಈಗಾಗಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ಗ್ಲೆನ್ ಮ್ಯಾಕ್ಸ್ ವೆಲ್, ರಿಕಿ ಪಾಂಟಿಂಗ್ ಧನಿ ಎತ್ತಿದ್ದಾರೆ.ಕ್ರಿಕೆಟ್ ನ ಆತ್ಮ ಎಂದೇ ಕರೆಯುವ ಐದು ದಿನಗಳ ಟೆಸ್ಟ್ ಕ್ರಿಕೆಟ್ ಅನ್ನು ನಾಲ್ಕು ದಿನಗಳಿಗೆ ಇಳಿಸುವ ಯೋಜನೆ ಸರಿಯಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಹಿಂದೆಯೇ ವಿರೋಧಿಸಿದ್ದಾರೆ.2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ  ಒಂದು ಭಾಗವಾಗಿ ಐಸಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ದೇಶೀಯ ಟಿ-20 ಲೀಗ್ ಗಳು ಹಾಗೂ ಸಹಭಾಗಿತ್ವ ಟೂರ್ನಿಯ ಆಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಹಾಗಾಗಿ, ದ್ವಿಪಕ್ಷೀಯ ವೇಳಾಪಟ್ಟಿಯಲ್ಲಿ ದೀರ್ಘ ಕಾಲದ ಕ್ರಿಕೆಟ್ ಮಾದರಿಯಲ್ಲಿ ಒಂದು ದಿನ ಉಳಿಸಲು ಯೋಜನೆ ಹಾಕಿಕೊಂಡಿದೆ.