ನವದೆಹಲಿ, ಫೆ 27 : ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗುವಾಹಟಿಯಲ್ಲಿ ಎರಡು ತವರು ಪಂದ್ಯಗಳಾಡಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ. ಆ ಮೂಲಕ ಎರಡನೇ ತವರು ಅಂಗಳದಲ್ಲಿ ಆಡುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಕನಸು ನನಸಾಯಿತು.
ಮಾರ್ಚ್ 29 ರಿಂದ ಐಪಿಎಲ್ ಶುರುವಾಗಲಿದ್ದು, ಏಪ್ರಿಲ್ 5ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಗೂ ಏ.9 ಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಎರಡು ಹಣಾಹಣಿಗಳಿಗೆ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಆತಿಥ್ಯ ವಹಿಸಲಿದೆ. ಈ ಎರಡೂ ಪಂದ್ಯಗಳು ರಾತ್ರಿ 8 ಗಂಟೆಗೆ ಶುರುವಾಗಲಿದೆ.
ಗುವಾಹಟಿಯನ್ನು ಎರಡನೇ ತವರು ಅಂಗಳವೆಂದೆ ಪ್ರತಿಪಾದಿಸಿದ್ದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಇಲ್ಲಿನ ಬರ್ಸಪರ ಅಂಗಳದಲ್ಲಿ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲು ಬಿಸಿಸಿಐ ಅನುಮತಿ ನೀಡಿದೆ. ಆ ಮೂಲಕ ಗುವಾಹಟಿಯಲ್ಲಿನ ರಾಜಸ್ಥಾನ್ ತಂಡದ ಅಭಿಮಾನಿಗಳಿಗೆ ಹೆಚ್ಚಿನ ಸಂತಸ ಉಂಟಾಗಿದೆ.
2018ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿನಿಧಿಸಿದ್ದ ರಿಯಾನ್ ಪರಾಗ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 20 ಕ್ಷ ರೂ.ಗಳಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿತ್ತು. ರಿಯಾನ್ ಪರಾಗ್ ಅವರು ಅಸ್ಸಾಂ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕ್ರಿಕೆಟಿಗರ ಪುತ್ರ. ರಿಯಾನ್ ಲೆಗ್ ಸ್ಪಿನ್ ಕೂಡ ಮಾಡಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಅವರು ಏಳು ಪಂದ್ಯಗಳಿಂದ 160 ರನ್ ಹಾಗೂ ಎರಡು ವಿಕೆಟ್ ಪಡೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಏಕೈಕ ಅರ್ಧಶತಕ ಸಿಡಿಸಿದ್ದರು.
ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರನ್ನು ತಂಡದ ನೂತನ ನಾಯಕದ ಜವಾಬ್ದಾರಿ ವಹಿಸಿದೆ. ಗುವಾಹಟಿಯಲ್ಲಿ ಇಂದು, ನಾಳೆ ಹಾಗೂ 29 ರಂದು ಮೂರು ದಿನಗಳ ಕಾಲ ನಡೆಯುವ ರಾಜಸ್ಥಾನ್ ರಾಯಲ್ಸ್ ತಂಡದ ತರಬೇತಿ ಶಿಬಿರದಲ್ಲಿ ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ಪ್ರಮುಖ ಆಟಗಾರರು ಭಾಗವಹಿಸಿದ್ದಾರೆ.