ಕೊರೋನಾ ವೈರಸ್ ನಿಯಂತ್ರಣ: ವೈದ್ಯರು, ಜಿಲ್ಲಾಧಿಕಾರಿಗಳೊಂದಿಗೆ ಬಿ.ಸಿ.ಪಾಟೀಲ್ ಸಭೆ

ಹಾವೇರಿ, ಮಾ 26, ಕೊರೊನಾ ವೈರಸ್ ಹರಡುತ್ತಿರುವ  ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸ್ಥಳೀಯ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಸಭೆ  ನಡೆಸಿದರು.ಬಳಿಕ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಗತ್ಯವಸ್ತುಗಳ ಖರೀದಿಗೆ ಹಾಗೂ ತುರ್ತು  ಕೆಲಸಕ್ಕೆ ಹೋಗುವವರಿಗೆ ಮತ್ತು ವಾಹನಗಳಿಗೆ ಪರವಾನಿಗೆ ನೀಡಬೇಕು. ಸ್ಕೇರ್ ಸಿಟಿ ಆಗದಂತೆ  ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
ಜನರಿಗೆ ಮೂಲಭೂತ ಅಗತ್ಯ ವಸ್ತುಗಳು  ಕೊರತೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ. ಲಾಕ್‌ಡೌನ್ ಪರಿಸ್ಥಿತಿಯನ್ನು ಯಾರೂ ಸಹ  ದುರುಪಯೋಗಪಡಿಸಿಕೊಳ್ಳುವುದಾಗಲೀ ಕಾಳಸಂತೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವುದಾಗಲಿ  ಮಾಡಬಾರದು ಎಂದು ಖಡಕ್ ಸೂಚನೆ ನೀಡಿದರು.ಪ್ರಧಾನಿ ನರೇಂದ್ರ  ಮೋದಿ ಅವರು ಹೇಳಿದಂತೆ ಮಾಧ್ಯಮವು ಸಹ ತುರ್ತುಸೇವೆಯಲ್ಲಿದೆ. ಉತ್ತಮವಾಗಿ ಜವಾಬ್ದಾರಿ  ನಿರ್ವಹಿಸುತ್ತಿರುವ ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಬಿ.ಸಿ.ಪಾಟೀಲ್  ಹೇಳಿದರು.
ಆದಷ್ಟು ಬೇಗ ಜಿಲ್ಲಾಸ್ಪತ್ರೆ ವತಿಯಿಂದ ಹದಿನೈದು ಸಾವಿರ ಮಾಸ್ಕ್‌ಗಳನ್ನು ವಿತರಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ  ರೋಗಿಗಳಿಗಿರುವ ಸೌಕರ್ಯಗಳ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಬಗ್ಗೆ ಚರ್ಚೆ  ನಡೆಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ವಿತರಿಸುವುದಾಗಿ ಸರ್ಕಾರವು ಹೇಳಿದೆ. ಕೇಂದ್ರ  ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳು ದೊರೆಯುವ ಅಂಗಡಿಗಳನ್ನು  ಮುಚ್ಚಲಾಗುವುದಿಲ್ಲ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.