ಬಡವರಿಗೆ ಆಹಾರ ವಿತರಿಸಲು 4 ಎನ್‌ಜಿಒಗಳಿಗೆ ಬಿಬಿಎಂಪಿ ಅನುಮತಿ

ಬೆಂಗಳೂರು, ಏಪ್ರಿಲ್ 4, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಶನಿವಾರದಿಂದ ನಿರ್ಗತಿಕರು ಮತ್ತು ಬಡವರಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಲು ನಾಲ್ಕು ಎನ್‍ಜಿಒಗಳಿಗೆ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರ ನಿಧಿಯಡಿ, ತಲಾ 2,000 ರೂಗಳನ್ನು ಈಗಾಗಲೇ ಬೆಂಗಳೂರಿನಲ್ಲಿ 15 ಲಕ್ಷ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಎನ್‌ಜಿಒಗಳು ಈ ಕಾರ್ಮಿಕರಿಗೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಆಹಾರ ಪೊಟ್ಟಣಗಳನ್ನು ನೀಡಲು ಅನುಮತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರ ಉಚಿತ ಬೇಯಿಸಿದ ಆಹಾರ ವಿತರಣೆ ನಿಲ್ಲಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲಿದೆ.  ಇಂದಿರಾ ಕ್ಯಾಂಟೀನ್‌ಗಳಲ್ಲಿ ಭಾನುವಾರದಿಂದ ಬೆಳಗಿನ ಉಪಹಾರ( 5 ರೂ.), ಮಧ್ಯಾಹ್ನ ಮತ್ತು ರಾತ್ರಿ ಊಟ ( ಪ್ಲೇಟ್‍ಗೆ 10 ರೂ.) ಒದಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.