ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆಗೆ ನಿರ್ದೇಶನ ಕೋರಿದ್ದ ಅರ್ಜಿ ವಜಾ

ಚೆನ್ನೈ, ಆ 29     ತಮಿಳುನಾಡು ಸಂಪುಟ ಸಭೆಯ ನಿರ್ಣಯದ ಅನುಸಾರ  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಕರಣದ ಎಲ್ಲಾ ಏಳು ಸಜಾಬಂಧಿಗಳನ್ನು  ಅವಧಿಗೆ ಮುನ್ನವೇ ಬಿಡುಗಡೆಗೊಳಿಸಬೇಕು ಎಂದು ಕೋರಿ ಅವರಲ್ಲಿ ಒಬ್ಬರಾದ ಎಸ್.ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.  

ಸಂವಿಧಾನದ 161ನೇ ಪರಿಚ್ಛೇದದ ಅನುಸಾರ ರಾಜ್ಯಪಾಲರಿಗೆ ಸಂಪುಟ ಸಭೆಯ ನಿರ್ಣಯದ ಸಂಬಂಧ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಒತ್ತಡ ಹೇರಲಾಗದು ಎಂದು ರಾಜ್ಯ ಸರ್ಕಾರದ ಹೇಳಿಕೆ ಪರಿಗಣಿಸಿದ ನ್ಯಾಯಮೂರ್ತಿ ಆರ್. ಸುಬ್ಬಯ್ಯ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.  

ಸರ್ಕಾರದ ಶಿಫಾರಸುಗಳ ಕುರಿತು ತಮ್ಮದೇ ಆದ ವಿವೇಚನೆ ಬಳಸಿ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಸಂವಿಧಾನ ಅಧಿಕಾರ ನೀಡಿದೆ. ಅವರ ಮೇಲೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಸರ್ಕಾರ  ಒತ್ತಡ ಹೇರಲಾಗದು ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದರು.  

ಮಗಳ ವಿವಾಹದ ಸಿದ್ಧತೆಗಾಗಿ ಮೊದಲು ಒಂದು ತಿಂಗಳು ನಂತರ ಮೂರು ವಾರಗಳ ವಿಸ್ತೃತ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿರುವ ನಳಿನಿ, 2018ರ ಸೆಪ್ಟೆಂಬರ್ 9ರಂದು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿ, ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸುವ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿದೆ. ಅದಾಗಿ 10 ತಿಂಗಳು ಕಳೆದರೂ, ರಾಜ್ಯಪಾಲರು ಈ ಸಂಬಂಧ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದ್ದರು.