ವಸ್ತುಗಳ ಖರೀದಿಯಲ್ಲಿ ಜಾಗೃತಿ ಅಗತ್ಯ : ಡಿಸಿ ಜಾನಕಿ

Awareness is needed in buying things: DC Janaki

ರಾಷ್ಟ್ರಿಯ ಗ್ರಾಹಕರ ದಿನಾಚರಣೆ ಽ ಜಾಗೃತಿ ಕರಪತ್ರ ಬಿಡುಗಡೆ 

ಬಾಗಲಕೋಟೆ 24: ವಸ್ತುಗಳ ಖರೀದಿಯಲ್ಲಿ ಜಾಗೃತಿ ವಹಿಸಿದಾಗ ಮಾತ್ರ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. 

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೋಡಲು ಒಳ್ಳೆಯ ಗುಣಮಟ್ಟದ ವಸ್ತುವಿನ ಹಾಗೆ ಕಂಡರು ಪರೀಶೀಲಿಸಿದ ಮೇಲೆಯೇ ಖರೀದಿಗೆ ಮುಂದಾಗಬೇಕು ಎಂದರು. 

ಗ್ರಾಹಕರಿಲ್ಲದೇ ವರ್ತಕರು ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ವರ್ತಕರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದು, ವ್ಯವಹಿಸುವಾಗ ಎಚ್ಚರಿಕೆಯಿಂದ ಇರಬೇಕು. ನಾವು ಕೊಡುವ ಮೌಲ್ಯಕ್ಕೆ ತಕ್ಕ ವಸ್ತು ಆಗಿರಬೇಕು. ಬಣ್ಣ, ರುಚಿಗೆ ಮರುಳಾಗದೇ ಗುಣಮಟ್ಟದ ವಸ್ತು ಖರೀದಿಗೆ ಮುಂದಾಗಬೇಕು. ಮೋಸ ಹೋದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ಸಾದ್ಯವೆಂದರು.  

ಜಿ.ಪಂ ಸಿಇಓ ಶಶೀಧರ ಕುರೇರ ಮಾತನಾಡಿ ಗ್ರಾಹಕರು ಯಾವುದೇ ಒಂದು ವಸ್ತು ಖರೀದಿಸುವ ಮುನ್ನ ಗುಣಮಟ್ಟ ಪರೀಶೀಲಿಸುವದರ ಜೊತೆಗೆ ಖರೀದಿಸಿದಕ್ಕೆ ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮೋಸ ಹೋದಲ್ಲಿ ದೂರು ಕೊಡಲು ದಾಖಲೆಗಳು ಮುಖ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಇರುವ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಆನ್‌ವ್ಯವಸ್ಥೆಯಲ್ಲಿ ಜನ ಸಾಕಷ್ಟು ಮೋಸ ಹೋಗುತ್ತಿದ್ದಾರೆ. ನೀವು ಎಲ್ಲಿಯವರೆಗೆ ಜಾಗೃತರಾಗುವದಿಲ್ಲವೋ ಅಲ್ಲಿಯ ವರೆಗೆ ಮೋಸ ಮಾಡುತ್ತಾ ಬರುತ್ತಾರೆ. ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ ಮಾತನಾಡಿ 1986 ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ತಂದಾಗ ಆನ್‌ಲೈನ್ ಮಾರುಕಟ್ಟೆ ಇರಲಿಲ್ಲ. ಆಗ ನೇರ ಮಾರುಕಟ್ಟೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಬಂದಿರುವದರಿಂದ ಕಾಯ್ದೆಯ ನೂನ್ಯತೆಯನ್ನು ಸರಿಪಡಿಸಿ 2019ರಲ್ಲಿ ಗ್ರಾಹರಕ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ. ಗ್ರಾಹಕರ ಮೋಸ ಹೋದಲ್ಲಿ ಖುದ್ದಾಗಿ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿದರು. ನ್ಯಾಯವಾದಿ ಜೆ.ಎನ್‌.ಕುಲಕರ್ಣಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಸಿ.ಎಚ್‌.ಸಮಿಉನ್ನಿಸ್ ಅಬ್ರಾರ್, ಡಿಡಿಪಿಐ ವಿವೇಕಾನಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಹಾಗೂ ಇಲಾಖೆಯ ಆಹಾರ ಇಲಾಖೆಯ ಲೆಕ್ಕಾಧಿಕಾರಿ ಆರ್‌.ಎಸ್‌.ಚೌದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಗ್ರಾಹಕರ ಜಾಗೃತಿ ಪ್ರಾತ್ಯಕ್ಷಿಕೆ 

ಆಹಾರ ಸುರಕ್ಷತೆ ್ಘ ಗುಣಮಟ್ಟ ಇಲಾಖೆಯಿಂದ ಆಹಾರ ಕಲಬರಕೆ ಕುರಿತು, ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ತೂಕ ್ಘ ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ಪ್ರದರ್ಶನ, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಲೈಸನ್ಸ್‌, ರಸ್ತೆ ನಿಯಮ, ಪೂನಂ ಗ್ಯಾಸ್ ಸೆಂಟರ ಅವರಿಂದ ಎಲ್‌.ಪಿ.ಜಿ ಸುರಕ್ಷತೆ ಬಗ್ಗೆ, ಲೀಡ್ ಬ್ಯಾಂಕ್‌ನಿಮದ ಬ್ಯಾಂಕ್ ಸೌಲಭ್ಯ, ಭಾರತೀಯ ಸಂಚಾರಿ ನಿಗಮದಿಂದ ದೂರ ಸಂಪರ್ಕ ಸೌಲಭ್ಯ ಹಾಗೂ ಕೆ.ಎಸ್‌.ಆರ್‌.ಟಿಸಿ ಅವರಿಂದ ಸಾರಿಗೆ ಸೌಲಭ್ಯಗಳ ಬಗ್ಗೆ ಜಾಗೃತಿಯ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.