ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ನೆರವು ನೀಡಲು 20 ಕೋಟಿ ರೂ ಬಿಡುಗಡೆ

assistence

ಬೆಂಗಳೂರು, ಮೇ 16;ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ ಪರಿಹಾರ ನೀಡಲು ರಾಜ್ಯ ಸರ್ಕಾರ 20 ಕೋಟಿ ರೂ ಬಿಡುಗಡೆ ಮಾಡಿದೆ. 
 ರಾಜ್ಯದಲ್ಲಿ 7.75 ಲಕ್ಷ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡುತ್ತಿದ್ದು, "ಸೇವಾಸಿಂಧು" ವೆಬ್ ಪೋರ್ಟಲ್ ಮೂಲಕ ಅರ್ಜಿ‌ಸಲ್ಲಿಸುವಂತೆ ಸೂಚಿಸಲಾಗಿದೆ.
 ಈ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಎಲ್ಲಾ ಅರ್ಜಿಗಳು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಕೆಯಾಗಬೇಕು. ಜತೆಗೆ ಮಾರ್ಚ್ 24ಕ್ಕೆ ಅನ್ವಯವಾಗುವಂತೆ ಚಾಲನಾ ಪ್ರಮಾಣ ಪತ್ರ, ವಾಹನ ಸುಸ್ಥಿತಿ ಪ್ರಮಾಣ ಪತ್ರ ಹೊಂದಿರುವ ವಾಹನಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
 ಜತೆಗೆ ಆಧಾರ್ ಸಂಖ್ಯೆ, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆಯನ್ನು ಫಲಾನುಭವಿಗಳು ಸಲ್ಲಿಸಬೇಕು. ಮ್ಯಾಕ್ಸಿ ಕ್ಯಾಬ್ ಗಳಿಗೆ ಇದು ಅನ್ವಯವಾಗುವುದಿಲ್ಲ. ಪರಿಹಾರ ಧನ ಕೇವಲ ಅನುಜ್ಞಾ ಪತ್ರ ಹೊಂದಿರುವವರಿಗೆ ಮಾತ್ರ  ಸೌಲಭ್ಯ ದೊರೆಯಲಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರ ಪರಿಹಾರ ಧನ ಮಾಲೀಕರಿಗೆ  ಪಾವತಿಯಾಗದಂತೆ ಮತ್ತು ಡುಪ್ಲಿಕೇಷನ್ ಆಗದಂತೆ ತಡೆಯಬೇಕು. ಸರಕಾರ ಮತ್ತು ಫಲಾನುಭವಿಗಳ ಜೊತೆ ನೇರ ಸಂಪರ್ಕವಿರಬೇಕು.  ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬಾರದು.
ಫಲಾನುಭವಿ ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆಯೇ ಇಲ್ಲವೆ ಎಂಬುದನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು.  ಇದಕ್ಕಾಗಿ ದೃಡೀಕರಣ ಪತ್ರ ಪಡೆಯಬೇಕು. ಯೋಜನೆ ಅನುಷ್ಠಾನಗೊಳಿಸಲು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ.