ಅಧಿಕಾರಿಗಳು ನಿಷ್ಪಕ್ಷವಾಗಿ, ಮಾನವೀಯತೆಯಿಂದ ಕಾರ್ಯನಿರ್ವಹಿಸಿ: ಡಿಸಿಎಂ

ಬಾಗಲಕೋಟೆ: ಕಳೆದ ಮುರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಾದ ಮನೆ ಹಾನಿ, ಬೆಳೆಹಾನಿ, ಜನ-ಜಾನುವಾರುಗಳ ಸಮೀಕ್ಷೆಯನ್ನು ಅಧಿಕಾರಿಗಳು ನಿಷ್ಪಕ್ಷಪಾತವಾಗಿ, ಮಾನವೀಯತೆಯಿಂದ, ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಪರಿಹಾರ ಹಾಗೂ ಅತಿವೃಷ್ಟಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಪ್ರವಾಹದಿಂದಾದ ಸಂತ್ರಸ್ತರಿಗೆ ಎಲ್ಲ ರೀತಿಯ ಪರಿಹಾರ ಒದಗಿಸಲಾಗುತ್ತಿದೆ. ಇತ್ತೀಚೆಗೆ ಮಳೆಯಿಂದಾದಹಾನಿಯನ್ನು ನಿಷ್ಪಕ್ಷಪಾತವಾಗಿ ಮಾನವೀಯತೆಯಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದರು. ಸಮೀಕ್ಷೆಯಲ್ಲಿ ಮಣ್ಣಿನ ಮನೆಗಳಿಗೆ ಹೆಚ್ಚು ಗಮನ ಕೊಟ್ಟು ಸೂಕ್ತ ಪರಿಹಾರ ಕೊಡುವ ಕೆಲಸವಾಗಬೇಕು. ರೈತರ ಹೊಲದಲ್ಲಿ ಕಟ್ಟಿದ ಮನೆ ಹಾನಿಗಳನ್ನು ಪಾರ್ಮ ಹೌಸ್ ಎಂದು ಸಮೀಕ್ಷೆಯಲ್ಲಿ ಪರಿಗಣಿಸುವಂತೆ ತಿಳಿಸಿದರು. ಇಡೀ ಜಿಲ್ಲೆಯಾದ್ಯಂತ ಸಮೀಕ್ಷೆ ಕೈಗೊಳ್ಳಲು ಸೂಚಿಸಿದರು.

ಕಳೆದ ಮೂರು ದಿನಗಳಿಂದ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 109 ಗ್ರಾಮಗಳು ಬಾಧಿಗೊಂಡಿವೆ. 888 ಬಾಗಶಃ ಮನೆಗಳು ಹಾನಿಗೊಳಗಾಗಿವೆ. 853 ಕುಟುಂಬಗಳ ಬಾಧಿಗೊಂಡಿದ್ದು, ಈ ಪೈಕಿ ಹುನಗುಂದ ತಾಲೂಕಿನಲ್ಲಿ ಒಟ್ಟು 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 3404 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಈ ನೆರೆ ಹಾಗೂ ಪ್ರವಾಹದಿಂದ ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದ ರಾಮಪ್ಪ ಮಲ್ಲಪ್ಪ ಹೊನ್ನನ್ನವರ ಪ್ರವಾಹದಿಂದ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. 17 ಜಾನುವಾರುಗಳು ಹಾಗೂ 4480 ಕೋಳಿಗಳು ಜೀವಹಾನಿಯಾಗಿದ್ದು, ತಕ್ಷಣ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಹುನಗುಂದ ತಾಲೂಕಿನಲ್ಲಿ ನಿಂಬಲಗುಂದಿ, ಚಿತ್ತರಗಿ, ಗಂಜಿಹಾಳ, ಕಮತಗಿ, ಹಿರೇಮಾಗಿ, ಚಿಕ್ಕಮಾಗಿ, ಹಿರೇಮಳಗಾವಿ, ಕೆಂಗಲ್, ಒರಗೊಡದಿನ್ನಿ, ಬಿಸನಾಳಕೊಪ್ಪ ಹಾಗೂ ಇದ್ದಲಗಿ ಗ್ರಾಮಗಳು ನೆರೆ ಹಾಗೂ ಪ್ರವಾಹಕ್ಕೆ ತುತ್ತಾಗಿವೆ. ಯುಕೆಪಿಗೆ ಸಂಬಂಧಿಸಿದಂತೆ 13 ಗ್ರಾಮಗಳ ಪೈಕಿ 9 ಗ್ರಾಮಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಉಳಿದ ಗ್ರಾಮ ಹಾಗೂ ಆಶ್ರಯ ಮನೆಗಳ ಹಕ್ಕುಪತ್ರಗಳನ್ನು ನವೆಂಬರ 10 ರೊಳಗಾಗಿ ಹಕ್ಕು ಪತ್ರ ನೀಡಲು ಕಾರಜೋಳ ಸೂಚಿಸಿದರು. ಮಳೆಯಿಂದ ಬೆಳೆ ಹಾನಿಯಾಗಿದ್ದು, ಪ್ರವಾಹದಲ್ಲಿ ಹಾನಿಗೊಳಗಾದ ಹಾನಿ ಬಿಟ್ಟು ಸದ್ಯ ಬೆಳೆದ ಬೆಳೆ ಹಾನಿಯನ್ನು ಸಮೀಕ್ಷೆ ನಡೆಸಲು ತಿಳಿಸಿದರು.

ಕಳೆದ ಆಗಸ್ಟ ಮಾಹೆಯಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ಒಟ್ಟು 7353 ಮನೆಗಳ ಪೈಕಿ 4756 ಮನೆಗಳಿಗೆ ಪರಿಹಾರ ನೀಡಲಾಗಿದೆ. ಎ ಮತ್ತು ಬಿ ವರ್ಗದ 5 ಲಕ್ಷ ಪರಿಹಾರದಡಿ ಈಗಾಗಲೇ 1115 ಮನೆಗಳಿಗೆ 1 ಲಕ್ಷ ರೂ. ಮೊದಲ ಕಂತಿನ ಪರಿಹಾರ ಜಮಾ ಮಾಡಲಾಗಿದೆ. ಸಿ ವರ್ಗದ ಮನೆಗಳಿಗೆ 3296 ಮನೆಗಳಿಗೆ ರೂ. 25 ಸಾವಿರ ಜಮಾ ಮಾಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ಆರ್.ಸಿ ಸೆಂಟರ್ಗಳಲ್ಲಿರುವ ಜಾಲಿಗಳನ್ನು ಸ್ವಚ್ಛಗೊಳಿಸಿದ ಬಾಕಿ ಹಣ ಇಲ್ಲಿಯವರೆಗೆ ನೀಡಿರುವುದಿಲ್ಲ. ತಕ್ಷಣ ಹಣ ನೀಡಲು ಸೂಚಿಸಿದರು. ಬಾಕಿ ಹಣ ನೀಡುವಲ್ಲಿ ಬೇಜವಾಬ್ದಾರಿ ತೋರಿದ ಹುನಗುಂದ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಕಾರಜೋಳ ಸೂಚಿಸಿದರು.

ಪ್ರವಾಹಕ್ಕೆ ಒಳಗಾದ ಮಳೆ ಆಶ್ರಿತ ಜಮೀನುಗಳಿಗೆ ಪ್ರತಿ ಹೆಕ್ಟೇರ್ಗೆ ರೂ. 16600, ನೀರಾವರಿ ಜಮೀನುಗಳಿಗೆ ಪ್ರತಿ ಹೆಕ್ಟೇರ್ಗೆ ರೂ.23500 ಹಾಗೂ ಹಣ್ಣುಗಳ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ರೂ.28000 ಪರಿಹಾರ ನೀಡಲಾಗುತ್ತಿದೆ. ಪ್ರತಿಯೊಬ್ಬರ ಖಾತೆಗಳನ್ನು 1 ರೂ. ಜಮಾ ಮಾಡಿ ಪರಿಶೀಲಿಸಲಾಗುತ್ತಿದ್ದು, ಪರಿಶೀಲನೆ ನಂತರ ಪರಿಹಾರ ಮಾಡಲಾಗುತ್ತಿದೆ ಎಂದರು. ವಿವಿಧ ಜಲಾಶಯಗಳಾದ ಹಿಪ್ಪರಗಿ 1.68 ಲಕ್ಷ ಕ್ಯೂಸೆಕ್ಸ್, ಆಲಮಟ್ಟಿ 2.50 ಲಕ್ಷ, ಹಿಡಕಲ್ 7,200, ನವೀಲುತೀರ್ಥ 5,704 ಹಾಗೂ ನಾರಾಯಣಪುರ ಜಲಾಶಯದಿಂದ 3.27 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾದ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.