ಮೆಲ್ಬೋರ್ನ್, ಜ 29, ಇಲ್ಲಿ ನಡೆಯುತ್ತಿರುವ ವರ್ಷದ ಮೊದಲನೇ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ಜ್ವೆರೆವ್ ಮೊದಲನೇ ಸೆಟ್ ನಲ್ಲಿ ಸೋಲು ಅನುಭವಿಸಿದರೂ ನಂತರದ ಪುಟಿದೆದ್ದು 1-6, 6-3, 6-4, 6-2 ಅಂತರದಲ್ಲಿ ಸ್ವಿಜರ್ ಲೆಂಡ್ ನ ಸ್ಟ್ಯಾನ್ ವಾವ್ರಿಂಕ ವಿರುದ್ಧ ಗೆದ್ದು ಉಪಾಂತ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ಜರ್ಮನಿ ಆಟಗಾರನ ಪಾಲಿಗೆ ಮೊದಲ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ಇದಾಯಿತು.
ಎರಡು ಗಂಟೆ 19 ನಿಮಿಷ ನಡೆದಿದ್ದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಜ್ವೆರೆವ್, ಸ್ವಿಜರ್ ಲೆಂಡ್ ಆಟಗಾರನನ್ನು ನಿಯಂತ್ರಿಸಿದರು. ಮೊದಲನೇ ಸೆಟ್ ನಲ್ಲಿ 1-6 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಅಲೆಕ್ಸಾಂಡರ್, ನಂತರ ಪುಟಿದೆದ್ದು, ಇನ್ನುಳಿದ ಮೂರೂ ಸೆಟ್ ಗಳಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡರು.ಇಂದು ತಡವಾಗಿ ನಡೆಯುವ ಮತ್ತೊಂದು ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ರಫೆಲ್ ನಡಾಲ್ ಅವರು ಡೊಮಿನಿಚ್ ಥೀಮ್ ವಿರುದ್ಧ ಸೆಣಸಲಿದ್ದಾರೆ. ಇದರಲ್ಲಿ ಗೆದ್ದ ಆಟಗಾರನ ವಿರುದ್ಧ ಜ್ವೆರೆವ್ ಉಪಾಂತ್ಯದಲ್ಲಿ ಸೆಣಸಲಿದ್ದಾರೆ.