ಮೆಲ್ಬೋರ್ನ್, ಜ 30, ಅಮೆರಿಕಾ ಟೆನಿಸ್ ಆಟಗಾರ್ತಿ ಸೋಫಿಯಾ ಕೆನಿನ್ ಗುರುವಾರ ವೃತ್ತಿ ಜೀವನದ ಮೊಟ್ಟ ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಫೈನಲ್ ತಲುಪಿದ್ದಾರೆ.ಇಂದು ನಡೆದ ಮಹಿಳೆಯರ ಸಿಂಗಲ್ಸ್ ಹಣಾಹಣಿಯ ಸೆಮಿಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸೋಫಿಯಾ ಕೆನಿನ್ ಅವರು ವಿಶ್ವದ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ಅವರ ವಿರುದ್ಧ 7-6, 7-5 ಅಂತರದಲ್ಲಿ ಗೆದ್ದು ಆಸ್ಟ್ರೇಲಿಯಾ ಓಪನ್ ಸೆಮಿಪೈನಲ್ ಪ್ರವೇಶಿಸಿದ್ದಾರೆ.
ಆ ಮೂಲಕ 2008ರ ಬಳಿಕ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ ಅತ್ಯಂತ ಕಿರಿಯ ಎಂಬ ಹಿರಿಮೆಗೆ ಪಾತ್ರರಾದರು. ವಿಶ್ವದ ಅಗ್ರ ಶ್ರೇಯಾಂಕಿತೆ ಸ್ಥಳೀಯ ಆಟಗಾರ್ತಿಯನ್ನು 21ರ ಪ್ರಾಯದ ಕೆನಿನ್ ನೇರ ಸೆಟ್ ಗಳಲ್ಲಿ ಸೋಲುಣಿಸಿದರು. ಇಂದು ತಡವಾಗಿ ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಸಿಮೋನಾ ಹಲೆಪ್ ಹಾಗೂ ಗಾರ್ಬಿನ್ ಮುಗುರುಜ ಅವರು ಸೆಣಸಲಿದ್ದಾರೆ. ಪುರುಷರ ಸೆಮಿಫೈನಲ್ ಹಣಾಹಣಿಯಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್ ನಡುವೆ ಮುಖಾಮುಖಿಯಾಗಲಿದ್ದಾರೆ.