ಆಸ್ಟ್ರೇಲಿಯಾ ಓಪನ್: ಸೆರೇನಾ ವಿಲಿಯಮ್ಸ್ ಹೋರಾಟ ಅಂತ್ಯ

ಮೆಲ್ಬೋರ್ನ್, ಜ 24,ಏಳು ಬಾರಿ ಚಾಂಪಿಯನ್ ಆಗಿ ಮೆರೆದಿದ್ದ ಅಮೆರಿಕದ ಸೆರೇನಾ ವಿಲಿಯಮ್ಸ್ ಅವರು ಇಲ್ಲಿ ನಡೆಯುತ್ತಿರುವ ಪ್ರಸಕ್ತ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯಾ ಓಪನ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಶುಕ್ರವಾರ ಇಲ್ಲಿನ ರಾಡ್ ಲೆವರ್ ಅರೇನಾ ಅಂಗಳದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿ 23 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಸೆರೇನಾ ವಿಲಿಯಮ್ಸ್ ಅವರು ಕಠಿಣ ಹೋರಾಟದ ನಡುವೆಯೂ 4-6, 7-6 (7-2), 5-7 ಅಂತರದಲ್ಲಿ ಚೀನಾದ ಕಿಯಾಂಗ್ ವಾಂಗ್ ವಿರುದ್ಧ ಸೋಲಿನ ಆಘಾತ ಅನುಭವಿಸಿದರು.

ಒಂದು ಗಂಟೆ 40 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ 38ರ ಪ್ರಾಯದ ಅಮೆರಿಕ ಆಟಗಾರ್ತಿ, ತನಗಿಂತ ಕೆಳ ಶ್ರೇಯಾಂಕದ ಅಂದರೆ, 29 ಸ್ಥಾನದ ಆಟಗಾರ್ತಿ ಎದುರು ನಂಬಲಾಗದ ಸೋಲು ಅನುಭವಿಸಿದರು. ಆ ಮೂಲಕ ಆಸ್ಟ್ರೇಲಿಯಾ ಓಪನ್ ಸವಾಲು ಅಂತ್ಯಗೊಳಿಸಿದರು.

ಪಂದ್ಯದ ಮೊದಲ ಸೆಟ್ ನಲ್ಲಿ ಸೋಲು ಅನುಭವಿಸಿದ್ದ ಸೆರೇನಾ ಎರಡನೇ ಸೆಟ್ ನಲ್ಲಿ ಪುಟಿದೆದ್ದು ಗೆಲುವು ಸಾಧಿಸಿದರು. ಆದರೆ, ಕೊನೆಯ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಕಠಿಣ ಹೋರಾಟ ನಡೆಸಿದರು. ಆದರೂ, ಚೀನಾ ಆಟಗಾರ್ತಿಯನ್ನು ನಿಯಂತ್ರಿಸುವಲ್ಲಿ ವಿಫಲರಾದರು. ವೃತ್ತಿ ಜೀವನದ 24ನೇ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಡಬೇಕೆಂದು ಕನಸು ಕಂಡಿದ್ದ ಸೆರೇನಾಗೆ ಚೀನಾ ಆಟಗಾರ್ತಿ ನಂಬಲಾಗದ ರೀತಿಯಲ್ಲಿ ಆಘಾತ ನೀಡಿದರು.