ಮೆಲ್ಬೋರ್ನ್, ಜ 17: ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಆಸ್ಟ್ರೇಲಿಯಾ ಓಪನ್ ಪ್ರದಾನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಶುಕ್ರವಾರ ವಿಫಲರಾದರು. ಆ ಮೂಲಕ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಗೆ ಅರ್ಹತೆ ಪಡೆಯುವ ಭಾರತದ ಹೋರಾಟ ಅಂತ್ಯವಾಯಿತು. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಪ್ರಜ್ಞೇಶ್ ಗುಣೇಶ್ವರನ್, 6-7 (2), 2-6 ಅಂತರದಲ್ಲಿ ಗುಲ್ಬೀಸ್ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ ಚೆನ್ನೈ ಆಟಗಾರನ ಆಸ್ಟ್ರೇಲಿಯಾ ಓಪನ್ ಆಡುವ ಕನಸು ಭಗ್ನವಾಯಿತು.ಮೊದಲ ಸೆಟ್ ನಲ್ಲಿ ತೀವ್ರ ಪೈಪೋಟಿ ನೀಡಿ ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಸೋಲು ಅನುಭವಿಸಿದ್ದ ಗುಣೇಶ್ವರನ್, ಎರಡನೇ ಸೆಟ್ ನಲ್ಲಿ ಪುಟಿದೇಳುವಲ್ಲಿ ವಿಫಲರಾದರು. ಎದುರಾಳಿ ಆಟಗಾರ ಬಿರುಸಾದ ಹೊಡೆತಗಳಿಗೆ ಭಾರತದ ಆಟಗಾರ ಮಂಕಾದರು. 2-6 ಅಂತರದಲ್ಲಿ ಪಂದ್ಯವನ್ನು ಗುಲ್ಬೀಸ್ ಗೆ ಬಿಟ್ಟುಕೊಟ್ಟರು.ಗುರುವಾರ ಭಾರತದ ಮತ್ತೊರ್ವ ಆಟಗಾರ ಸುಮಿತ್ ನಗಾಲ್ ಈಜಿಪ್ಟ್ ನ ಮೊಹಮದ್ ಸಫ್ವತ್ ವಿರುದ್ಧ ಸೋಲು ಅನುಭವಿಸಿದ್ದರು.