ಮೆಲ್ಬೋರ್ನ್, ಜ 28 ಸುಮಾರು 36 ವರ್ಷಗಳ ಬಳಿಕ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ಸ್ ತಲುಪಿದ ಮೊದಲ ಆಸ್ಟ್ರೇಲಿಯಾ ಆಟಗಾರ್ತಿ ಎಂಬ ಹಿರಿಮೆಗೆ ಆಶ್ಲೆ ಬಾರ್ಟಿ ಮಂಗಳವಾರ ಭಾಜನರಾದರು. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 7-6(6), 6-2 ಅಂತರದಲ್ಲಿ ವಿಶ್ವದ ಏಳನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ವಿರುದ್ಧ ಗೆದ್ದು ಉಪಾಂತ್ಯಕ್ಕೆ ಲಗ್ಗೆ ಇಟ್ಟರು. ಒಟ್ಟು ಒಂದು ಗಂಟೆ 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ 23ರ ಪ್ರಾಯದ ಆಟಗಾರ್ತಿ ಪ್ರಶಸ್ತಿ ಗೆಲ್ಲುವ ಹಾದಿಯತ್ತ ದಿಟ ಹೆಜ್ಜೆ ಇಟ್ಟರು.
ಈ ಗೆಲುವಿನೊಂದಿಗೆ ಬಾರ್ಟಿ ತಮ್ಮ ವೃತ್ತಿ ಜೀವನದ ಪ್ರದಾನ ಸುತ್ತಿನಲ್ಲಿ ಗೆದ್ದ 150ನೇ ಪಂದ್ಯ ಇದಾಯಿತು. ಜತೆಗೆ, ಹಾರ್ಡ್ ಕೋರ್ಟ್ ನಲ್ಲಿ 100ನೇ ಪಂದ್ಯದ ಜಯ ಕೂಡ ಇದಾಯಿತು.1984ರಲ್ಲಿ ವೆಂಡಿ ಟರ್ನ್ ಬುಲ್ ಬಳಿಕ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಮೊದಲ ಆಟಗಾರ್ತಿ ಎಂಬ ಸಾಧನೆಗೆ ಬಾರ್ಟಿ ಭಾಜನರಾಗಿದ್ದಾರೆ. ಟರ್ನ್ ಬುಲ್ ಅವರು ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ್ದ ಕೊನೆಯ ಆಟಗಾರ್ತಿ ಕೂಡ ಎಂಬ ಹಿರಿಮೆಯೂ ಅವರ ಹೆಸರಿನಲ್ಲಿದೆ. ಇದೀಗ ಬಾರ್ಟಿ ಪೈನಲ್ ತಲುಪಿದರೆ ಈ ದಾಖಲೆಯನ್ನು ಮುರಿಯಲಿದ್ದಾರೆ.
ಸೆಮಿಫೈನಲ್ ಹಣಾಹಣಿಯಲ್ಲಿ ಆಶ್ಲೆ ಬಾರ್ಟಿ ಅವರು ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ಸೆಣಸಲಿದ್ದಾರೆ. ಇವರು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಒನ್ಸ್ ಜಬೂರ್ ಅವರ ವಿರುದ್ಧ ಗೆದ್ದಿದ್ದರು.90 ನಿಮಿಷಗಳ ಕಾಲ ನಡೆದಿದ್ದ ವಿಶ್ವದ 14 ರ ಶ್ರೇಯಾಂಕದ ಕೆನಿನ್ 6-4, 6-4 ಅಂತರದಲ್ಲಿ ನೇರ ಸೆಟ್ ಗಳಲ್ಲಿ ಜಬೂರ್ ಅವರನ್ನು ಮಣಿಸಿದ್ದರು. ಆ ಮೂಲಕ ಜಬೂರ್ ವಿರುದ್ಧ ಒಟ್ಟಾರೆ ಮುಖಾಮುಖಿ ಸಾಧನೆಯಲ್ಲಿ ಸೋಫಿಯಾ ಕೆನಿನ್ 4-1 ಮುನ್ನಡೆ ಸಾಧಿಸಿದರು.