ಕಾರವಾರ 21: ಇಲ್ಲಿನ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಟ್ರೈನಿ ವೈದ್ಯರ ಮೇಲೆ ನಡೆದ ಹಲ್ಲೆ ಹಾಗೂ ಮಾರಾಮರಿ ಘಟನೆ ಯಾವದೇ ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ಕಾರವಾರ ಬಿಜೆಪಿ ಹೇಳಿದೆ.
ಕಾರವಾರ ಒಂದು ಶಾಂತಿಪ್ರಿಯ ತಾಲೂಕು. ಇಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಿರುವದು ಈ ಆಸ್ಪತ್ರೆಯ ದುರಾದ್ರಷ್ಟ. ಯಾವದೇ ರೋಗಿಗೆ ಚಿಕಿತ್ಸೆ ನೀಡುವಾಗ ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸುವ ವ್ಯವಸ್ಥೆ ಇದೆ.ಅದಕ್ಕೆ ಸಂಬಂಧಿತ ಬೇರೆ ವೇದಿಕೆ ಇದೆ. ಇಲ್ಲಿ ಒಬ್ಬ ರೋಗಿಯೂ ಸ್ಟ್ರೇಚರ್ ನಿಂದ ಕೆಳಗಡೆ ಬಿದ್ದಿರುವದಾಗಿ ತಿಳಿದು ಬಂದಿದೆ . ಅಲ್ಲಿ ಏನಾದರೂ ಕರ್ತವ್ಯ ಲೋಪವಾದರೆ ಅಲ್ಲಿಯ ಸಿ.ಸಿ. ಟಿವಿಯ ಆ ಕ್ಷಣದ ದೃಶ್ಯಾವಳಿಗಳನ್ನು ಗಮನಿಸಿ ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳ ಬಹುದಿತ್ತು. ಅದನ್ನು ಬಿಟ್ಟು ಕೆಲ ಪುಂಡರು ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ' ಡಿ ' ದರ್ಜೆ ನೌಕರರ ಮೇಲೆಯೇ ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಇದಾದ ನಂತರ ಈ ಘಟನೆಯನ್ನು ಅಲ್ಲಿಯ ನೌಕರರು ಪ್ರತಿಭಟಿಸಿದ್ದಾರೆ. ನಂತರ ಕ್ರಿಮ್ಸ್ ನಿರ್ದೇಶಕರು ಅವರನ್ನು ಸಮಾಧಾನಿಸಿ ತಪ್ಪಿತಸ್ಥರ ಮೇಲೆ ಪೊಲೀಸ್ ಇಲಾಖೆಗೆ ತಿಳಿಸಿ, ಕ್ರಮ ಕೈಗೊಳ್ಳುವದಾಗಿ ಹೇಳಿ ಕರ್ತವ್ಯಕ್ಕೆ ಮರಳುವಂತೆ ವಿನಂತಿ ಮಾಡಿದ ಮೇಲೆ , ಡಿ ದರ್ಜೆ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ.ಈಗ ಘಟನೆ ನಡೆದು 2 ದಿನವಾದರೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಯಾಕೆ ಮೀನ ಮೇಷ ಮಾಡುತ್ತಿದೆ ಗೊತ್ತಿಲ್ಲ. ಕ್ರಿಮ್ಸ್ ನಿರ್ದೇಶಕರು ಸ್ವತಃ ಆಸ್ಪತ್ರೆಯಲ್ಲಿ ನಡೆದ ಗಲಾಟೆಯ ಸಿ. ಸಿ. ಟಿವಿ ದೃಶ್ಯಾವಳಿ ಲಭ್ಯವಿರುವದಾಗಿ ಹೇಳಿಕೆ ನೀಡಿದ್ದಾರೆ.ಆದರೂ ಆರೋಪಿ ಗಳನ್ನು ಬಂಧಿಸುವ ಲಕ್ಷಣ ಕಾಣುತ್ತಿಲ್ಲ. ಇವರಿಗೆ ಒರ್ವ ರಾಜಕಾರಣಿಯ ಕೃಪಾಶೀರ್ವಾದವಿದ್ದು ಅವರನ್ನು ಬಚಾವ್ ಮಾಡಲಾಗುತ್ತಿದೆ ಎಂದು ಕಾರವಾರ ಬಿಜೆಪಿ ಸ್ಥಳೀಯ ಮುಖಂಡರು ಅಪಾದಿಸಿದ್ದಾರೆ. ಆರೋಪಿಗಳಲ್ಲಿ ಕೆಲವರು ಈ ಹಿಂದೆ ಪೊಲೀಸ್ ರ ಹಲವಾರು ಪ್ರಕರಣಗಳಿಗೆ ಬೇಕಾಗಿದ್ದವರು ಎಂದು ಗೊತ್ತಾಗಿದೆ. ಅದರಲ್ಲಿ ಓರ್ವನು ಈ ಹಿಂದೆ ಗೋವಾ ದಲ್ಲಿ ಯುವತಿಯೋರ್ವರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪೋಕ್ಸೋ ಆರೋಪಿ ಯಾಗಿದ್ದ, ಪ್ರಕರಣ ಇನ್ನೂವರೆಗೆ ವಿಚಾರಣೆ ಹಂತದಲ್ಲಿದೆ . ಈ ಆರೋಪ ಹೊತ್ತವ , ಸದ್ಯಕ್ಕೆ ರಾಜಕೀಯ ಮುಖಂಡನೋರ್ವರ ಆಶ್ರಯ ಪಡೆದಿದ್ದಾನೆ ಎಂದು ಕಾರವಾರ ಬಿಜೆಪಿ ಘಟಕ ಅಪಾದಿಸಿದೆ.
ಇಂತಹ ಕ್ರಿಮಿನಲ್ ಪ್ರಕರಣದ ಹಿನ್ನಲೆ ಉಳ್ಳವರಿಗೆ ಯಾವದೇ ರಕ್ಷಣೆ ನೀಡುವ ಪ್ರಯತ್ನವಾಗದೇ ಎಲ್ಲಾ ಆರೋಪಿಗಳನ್ನು ಅತೀ ಶೀಘ್ರ ಬಂಧಿಸಿ, ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಕಾರವಾರ ಬಿಜೆಪಿ ಘಟಕ ಆಗ್ರಹಿಸಿದೆ. ಅರೋಪಿಗಳನ್ನು ಬಂಧಿಸದೇ ಇದ್ದರೆ ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಕಾರವಾರ ಬಿಜೆಪಿಯ ಎರಡು ಮಂಡಲದ ಅಧ್ಯಕ್ಷರಾದ ನಾಗೇಶ್ ಕುರುಡೇಕರ್, ಸುಭಾಷ್ ಗುನಗಿ ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.