ಸವಣೂರ ಪಟ್ಟಣದ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ದಾಳಿ
ಹಾವೇರಿ 09: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಮುಕ್ತ ಯುವ ಅಭಿಯಾನದ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಸೋಮವಾರ ಸವಣೂರ ಪಟ್ಟಣದ ವಿವಿಧ ಧೂಮಪಾನ ಅಡ್ಡಾಗಳು ಹಾಗೂ ಪಾನ್‌ಶಾಪ್‌ಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಿದೆ.
ಪರವಾನಿಗೆ ಪಡೆಯದೇ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಹಾಗೂ ಕಾಯ್ದೆ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ, ತಂಬಾಕು ನಿಯಂತ್ರಣ ಕಾಯ್ದೆ-2003ರ ಕಲಂ-6ಬಿ ಅಡಿಯಲ್ಲಿ 07 ಪ್ರಕರಣಗಳಿಂದ ರೂ.700 ಹಾಗೂ ಕಲಂ-4ರ ಅಡಿಯಲ್ಲಿ ನಾಲ್ಕು ಪ್ರಕರಣಗಳಿಂದ ರೂ.200 ಸೇರಿ ಒಟ್ಟು ರೂ.900/-ದಂಡ ವಸೂಲಿ ಮಾಡಲಾಗಿದೆ. ಪರೋಕ್ಷವಾಗಿ ತಂಬಾಕು ಜಾಹೀರಾತು ಮಾಡುವ ಐದು ಫಲಕಗಳನ್ನು ತೆರವುಗೊಳಿಸಲಾಗಿದೆ.
ಈ ತನಿಖಾ ದಾಳಿ ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ.ಸಂತೋಷ ದಡ್ಡಿ, ಸಮಾಜ ಕಾರ್ಯಕರ್ತ ದಾದಾಪೀರ ಹುಲಿಕಟ್ಟಿ, ಹಿರಿಯ ಆರೋಗ್ಯ ನೀರೀಕ್ಷಕ ನಾರಾಯಣ ದಾಯಪಲ್ಲಿ, ಆರೋಗ್ಯ ನೀರೀಕ್ಷಕ ಮುತ್ತೇಶ ಭೋವಿ, ಮಹೇಶ ಕುಮ್ಮೂರ ಇತರರು ಉಪಸ್ಥಿತರಿದ್ದರು.