ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ದೇಶದ್ರೋಹ ಪ್ರಕರಣ ದಾಖಲಿಸಲು ಸುರೇಶ ಅಂಗಡಿ ಒತ್ತಾಯ

ಬೆಳಗಾವಿ, ಏ.20, ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿರುವಾಗ  ಯಾವುದೇ ಸಮುದಾಯದವರು ತಮ್ಮ ಧರ್ಮದ  ಹೆಸರಿಟ್ಟುಕೊಂಡು ಸಬೂಬು ಹೇಳುವ ಕೆಲಸ ಮಾಡಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಅಂತಹವರ ವಿರುದ್ಧ ದೇಶದ್ರೋಹ ಕೇಸ್ ಹಾಕಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ  ಸಚಿವ ಸುರೇಶ ಅಂಗಡಿ ಒತ್ತಾಯಿಸಿದ್ದಾರೆ.ಬೆಂಗಳೂರಿನಲ್ಲಿ  ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ಹಲ್ಲೆ ಸಂಬಂಧ ಸೋಮವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ  ಮಹಾಮಾರಿ ಯಾವುದೇ ಜಾತಿ, ಭಾಷೆ, ಗಡಿ, ಪ್ರದೇಶ ನೋಡಿಕೊಂಡು ಬರುವುದಿಲ್ಲ. ಇಡೀ ಜಗತ್ತು  ಈ ಮಹಾಮಾರಿಯಿಂದ ತಲ್ಲಣಿಸಿ ಹೋಗಿದೆ. ಇಂತಹ  ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ  ಹಲ್ಲೆ ಮಾಡಿರುವುದು ಸರಿಯಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಏನಾದರೂ ಶಾಸಕರ ಹೆಸರು  ಹೇಳಿ ಸಬೂಬು ಹೇಳಿದರೆ ಅವರ ವಿರುದ್ಧ ದೇಶದ್ರೋಹಿ ಕೇಸ್ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕು. ಇಡೀ ದೇಶ  ಒಂದಾಗಿ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂತಹ  ಸಮಯದಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ  ಬಸವರಾಜ ಬೊಮ್ಮಾಯಿ ಅವರು ಕಾನೂನು ಪಾಲಿಸುವಂತೆ ತಿಳಿಸಿದ್ದಾರೆ. ಅದರಂತೆ ಎಲ್ಲರೂ ಲಾಕ್‌ಡೌನ್ ಮತ್ತು ಸರ್ಕಾರದ ಆದೇಶ ಪಾಲಿಸಬೇಕು ಎಂದು ಸುರೇಶ್ ಅಂಗಡಿ ತಿಳಿಸಿದರು.