ಬೆಂಗಳೂರು, ಫೆ.8, ಎಐಸಿಸಿ ನಾಯಕ ರಾಹುಲ್ ಕುರಿತು ಮೋದಿ ನೀಡಿದ ಟ್ಯೂಬ್ ಲೈಟ್ ಹೇಳಿಕೆಗೆ ಕಿಡಿಕಾರಿದ ಖರ್ಗೆ, ಮೋದಿ ಜೀರೋ ಲೈಟ್ ಎಂದು ತಿರುಗೇಟು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಸಂಸತ್ತಿನಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಸಾಮಾನ್ಯ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ ಏನೂ ಮಾಡಿಲ್ಲ. ಹೇಳಿದಂತೂ ನಡೆದುಕೊಳ್ಳಲಿಲ್ಲ. ಇದರ ಬಗ್ಗೆ ಪ್ರಧಾನಿಯವರು ಮಾತನಾಡಲಿ. ಅದು ಬಿಟ್ಟು ರಾಹುಲ್ ಬಗ್ಗೆ ವೈಯಕ್ತಿಕ ಹೇಳಿಕೆ ಕೊಡುವುದು ಸರಿಯಲ್ಲ. ಟ್ಯೂಬ್ ಲೈಟ್ ಚೆನ್ನಾಗಿ ಬೆಳಗುತ್ತದೆ.ಆದರೆ ಮೋದಿ ಜಿರೋ ಲೈಟ್ ಇದ್ದಂತೆ.ಲೈಟ್ ಇರುತ್ತದೆ ಆದರೆ ಬೆಳಕು ಮಾತ್ರ ಇರಲ್ಲ. ತಾವು ಸಂಸತ್ತಿನಲ್ಲಿ ಇದ್ದಿದ್ದರೆ ಇದನ್ನೇ ಹೇಳುತ್ತಿದ್ದೆ ಎಂದರು.
ಕೋಲಾರಕ್ಕೆ ಹಿಂದೆ ಮಂಜೂರಾಗಿದ್ದ ರೈಲ್ವೇ ಕೋಚ್ ಫ್ಯಾಕ್ಟರಿಯನ್ನು ಕೇಂದ್ರ ಸರ್ಕಾರ ಬದಲಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ತಾವು ಹಿಂದೆ ರೈಲ್ವೇ ಸಚಿವನಾಗಿದ್ದಾಗ ಕೋಲಾರ ಕೋಚ್ ಫ್ಯಾಕ್ಟರಿ ತರಲಾಗಿತ್ತು. ತಮ್ಮ ಮತ ಕ್ಷೇತ್ರದ ಕಾರ್ಯಕ್ರಮಕ್ಕೂ ಗೈರಾಗಿ ಕೋಲಾರದ ಕೋಚ್ ಫ್ಯಾಕ್ಟರಿ ಗಾಗಿ ಕ್ಯಾಬಿನೆಟ್ ಸಭೆಯಲ್ಲಿ ಹಾಜರಾಗಿದ್ದೆ. ಈಗ ಕೋಚ್ ಪ್ಯಾಕ್ಟರಿ ಬದಲಿಸುತ್ತಿರುವುದು ಸರಿಯಲ್ಲ. ಕೇಂದ್ರದ ನಿರ್ಧಾರಕ್ಕೆ ವಿರೋಧವಿದೆ ಎಂದರು.
ಮೋದಿ ನೇತೃತ್ವದ ಸರ್ಕಾರ ಹೊಸದೇನು ಕೊಟ್ಟಿಲ್ಲ. ಹೆಚ್ಚು ಅನುದಾನ ಕೊಡುವುದನ್ನು ಕಡಿತ ಮಾಡಿರುವುದು ಸರಿಯಲ್ಲ. ತಾವು ಹಿಂದೆ ರೈಲ್ವೆ ಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಹೆಚ್ಚು ಅನುದಾನ ತಂದುಕೊಟ್ಟಿದ್ದು, ಈಗ ರಾಜ್ಯದ ರೈಲ್ವೆಗೆ ಹೆಚ್ಚು ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಕಲ್ಬುರ್ಗಿಗೆ ವಿಮಾನ ನಿಲ್ದಾಣ ಬರಲು ಕಾರಣಕರ್ತರಾಗಿರುವ ತಮಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ಆಹ್ವಾನಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಗಡ್ಕರಿ ಒಬ್ಬರು ಎಲ್ಲರನ್ನೂ ಪರಿಗಣಿಸುತ್ತಾರೆ. ಆದರೆ ಅವರಿಗೆ ಸ್ವತಂತ್ರ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಕಿದರು.
ಸಬ್ ಅರ್ಬನ್ ರೈಲು ಯೋಜನೆ ಒಂದು ಕೋಟಿ ಟೋಕನ್ ಹಣ ಕೊಟ್ಟಿದ್ದಾರೆ. ಇವರು ಕೊಟ್ಟಿರುವ ಹಣ ಸರ್ವೇ ಮಾಡುವುದಕ್ಕೂ ಆಗುವುದಿಲ್ಲ. ಹೊಸ ಯೋಜನೆ ಮಾಡುವ ಸಾಮರ್ಥ್ಯ ಇಲ್ಲ. ಹಳೆಯದನ್ನು ಮುಂದುವರೆಸುವ ಆಸಕ್ತಿಯೂ ಇಲ್ಲ. ತಾವು ಮಾಡಿದ್ದೇ ಅಂತಿಮ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ನರೇಗಾ ಯೋಜನೆಗೆ ಹಣ ಕಡಿಮೆ ನೀಡಿದ್ದಾರೆ. ಕೇಂದ್ರ ರಾಜ್ಯಕ್ಕೆ 9 ಸಾವಿರ ಕೋಟಿ ಅನುದಾನ ನೀಡಬೇಕು. ಕೇಂದ್ರ ಆ ಹಣವನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರದ ಹಣದಿಂದಲೇ ಕೆಲಸಗಳಾಗಬೇಕಿದೆ. ರಾಜ್ಯ ಸರ್ಕಾರದಲ್ಲಿಯೂ ಹಣದ ಕೊರತೆಯಿದೆ. ಹೀಗಾಗಿ ಕೆಲವು ಶಾಸಕರಿಗಷ್ಟೇ ಅನುದಾನ ಸಿಗುತ್ತಿದೆ. ಕೆಲವು ಶಾಸಕರಿಗೆ ನೂರು ಕೋಟಿ ನೀಡುತ್ತಾರೆ.
ಕೆಲವು ಶಾಸಕರ ಕ್ಷೇತ್ರಗಳಿಗೆ ಅನುದಾನವೇ ನೀಡುತ್ತಿಲ್ಲ. ನಂಜುಂಡಪ್ಪ ವರದಿ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೇಂದ್ರ ಹಾಗೂ ರಾಜ್ಯದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.ಹಾಲಿನಲ್ಲಿ ಸ್ವಲ್ಪ ನೀರು ಹಾಕಿದರೆ ಪರವಾಗಿಲ್ಲ. ನೀವು ನೀರಿಗೇ ಹಾಲು ಹಾಕಿದರೆ ಇನ್ನೇನು ಮಾಡುವುದು ?ಈಗ ರಾಜ್ಯ ಸರ್ಕಾರ ಬಜೆಟ್ ಘೋಷಿಸಲಿದೆ. ಬೆಂಗಳೂರು ಸುತ್ತಮುತ್ತಲೇ ಯೋಜನೆ ಘೋಷಿಸುವುದು ನಡೆಯುತ್ತದೆ. ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಎಂದು ಮಾಡಿದ್ದಾರೆ. ನೋಡೋಣ ಅದೆಷ್ಟು ಕಲ್ಯಾಣ ಮಾಡುತ್ತಾರೆ. ಹಣ ಬಿಡುಗಡೆಯನ್ನೇ ಮಾಡುವುದಿಲ್ಲ ಅಂದ ಮೇಲೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಕೆಲವರು ಕೇಳುತ್ತಿದ್ದಂತೆ ಹಣವನ್ನ ಬಿಡುಗಡೆ ಮಾಡುತ್ತಾರೆ. ಕೆಲವರು ಅನುದಾನ ಕೇಳಿದರೂ ಸರ್ಕಾರ ನೀಡುತ್ತಿಲ್ಲ. ಎಲ್ಲದಕ್ಕೂ ಮುಖ್ಯಮಂತ್ರಿ ಒಪ್ಪಿಗೆಯಾಗಬೇಕು ಎನ್ನುವುದಾದರೆ ಬಜೆಟ್ ಮಾಡುವುದಾದರೂ ಏಕೆ? ಎಂದು ರಾಜ್ಯ ಸರ್ಕಾರದ ವಿರುದ್ಧವೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಿಸಲು ಎರಡು ತಿಂಗಳೇ ಬೇಕಾದವು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅವರಿಗೇಕೆ ಚಿಂತೆ? ಇದು ಪಕ್ಷದ ಆಂತರಿಕ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.