ವಿಧಾನಸಭಾ ಚುನಾವಣೆ : ಇಂದೂ ಕೂಡ ಮೋದಿ - ರಾಹುಲ್ ನಡುವೆ ಜುಗಲ್ ಬಂದಿ

ನವದೆಹಲಿ, ಅ 14:    ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೇವಲ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಇಂದು ಹರಿಯಾಣದ ವಿವಿಧ ಕಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ಯುವ ನಾಯಕ ರಾಹುಲ್ ಗಾಂಧಿ ನಡುವೆ ಜುಗಲ್ ಬಂದಿ ನಡೆಯಲಿದೆ. ಇಬ್ಬರೂ ನಾಯಕರು ಇಂದು ಹಲವಾರು ಕಡೆ ಚುನಾವಣಾ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದು, ಆರೋಪ ಮತ್ತು ಪ್ರತ್ಯಾರೋಪಗಳಿಂದಾಗಿ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ನಿನ್ನೆಯಷ್ಟೇ ಇಬ್ಬರೂ ನಾಯಕರು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಸಭೆ ನಡೆಸಿದ್ದರು. ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದರು.  ಮತ್ತೊಂದೆಡೆ ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಹರಿಯಾಣದಲ್ಲಿ ರಾಹುಲ್, ಮೋದಿ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಹಲವು ಚುನಾವಣಾ ಸಭೆಗಳಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.