ಕರ್ತವ್ಯ ನಿರತ ಪುರಸಭೆಯ ಅಧಿಕಾರಿಯ ಮೇಲೆ ಹಲ್ಲೆ: ಕ್ರಮಕ್ಕೆ ಮನವಿ

ಲೋಕದರ್ಶನ ವರದಿ

ಬ್ಯಾಡಗಿ07: ಕರ್ತವ್ಯ ನಿರತ ಪುರಸಭೆಯ ಅಧಿಕಾರಿಯನ್ನು ಸಾರ್ವಜನಿಕರೊಬ್ಬರು ಅಶ್ಲೀಲವಾಗಿ ನಿಂಧಿಸಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಘಟಕ ತೀವ್ರವಾಗಿ ಖಂಡಿಸಿದ್ದು ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. 

       ಈ ಕುರಿತು ಶನಿವಾರ  ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷ ಎಂ.ಎನ್. ಕಂಬಳಿ, ಪಟ್ಟಣದಲ್ಲಿ ಸಂತೆಯ ದಿನವಾದ ಶನಿವಾರ ಬೆಳಿಗ್ಗೆ ಕೊರೊನಾ ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪುರಸಭಾ ಮುಖ್ಯಾಧಿಕಾರಿ ವಿ. ಎಂ. ಪೂಜಾರ ಅವರು ಚಾವಡಿ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿರುವ ವಿಷಯವನ್ನು ಅರಿತು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಏಕಾಏಕಿ ಪೂಜಾರ ಅವರ ಮೇಲೆ ರೇಗಾಡಿ ಹಲ್ಲೆಗೂ ಮುಂದಾಗಿರುವುದು ಖಂಡನೀಯವಾಗಿದೆ. ಕರ್ತವ್ಯ ನಿರತ ಪುರಸಭೆಯ ಅಧಿಕಾರಿಯ ಮೇಲೆ ಇಂತಹ ಕೃತ್ಯ ಎಸಗಿರುವ ವ್ಯಕ್ತಿಯನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಹಲ್ಲೆಗೊಳಗಾದ ಅಧಿಕಾರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ತಾಲೂಕಾ ಆಡಳಿತವನ್ನು ಒತ್ತಾಯಿಸಿದರು. 

     ಈ ಸಂದರ್ಭದಲ್ಲಿ ಪಿಡಿಓ ಸಂಘದ ಜಿಲ್ಲಾಧ್ಯಕ್ಷ ನೀಲಪ್ಪ ಕಜ್ಜರಿ, ಕೆ.ಎನ್. ಹುಚ್ಚೇರ, ನಾಗರಾಜ ಹಡಗಲಿ, ಸತೀಶ ಮೂಡೇರ, ಗುರುರಾಜ ಚಂದ್ರಿಕೇರ, ಬಿ. ಎನ್. ಖವಾಸ್, ಎಂ. ಎಫ್. ಕರಿಯಣ್ಣ ನವರ, ರಾಜಶೇಖರ ಲಮಾಣಿ, ಕೆ. ಎನ್. ಹೊಮ್ಮರಡಿ, ವಿ. ಎನ್. ಪಾಟೀಲ ಸೇರಿದಂತೆ ಇತರರು ಹಾಜರಿದ್ದರು. 

ವ್ಯಾಪಕ ಖಂಡನೆ...!! 

  ಪಟ್ಟಣದ ಡಿ.ಎಸ್.ಎಸ್. ಮತ್ತು ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ವಿ ಎಂ. ಪೂಜಾರ ಅವರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿದ್ದು, ತಪ್ಪಿತಸ್ಥ ವ್ಯಕ್ತಿಯನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.