ಧಾರವಾಡ 23: ಬೆಳಗಾವಿ ನಗರ ಸಾರಿಗೆ ಬಸ್ ಕಂಡಕ್ಟರ ಮಹಾದೇವ ಇವರ ಮೇಲೆ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ನಡೆದ ಹಲ್ಲೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ತೀವ್ರವಾಗಿ ಖಂಡಿಸಿದೆ.
ಬೆಳಗಾವಿ ನಗರ ಸಾರಿಗೆ ಬಸ್ ಕಂಡಕ್ಟರ ಮಹಾದೇವ ಅವರು ಬಸ್ಸಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಅವರ ಮೇಲೆ ಕೆಲ ಮರಾಠಿ ಭಾಷಾಂಧ ಪುಂಡರು ಹಲ್ಲೆ ಮಾಡಿದ್ದಲ್ಲದೆ, ಪೋಕ್ಸೋ ಕೇಸ್ ದಾಖಲಿಸಿದ್ದು, ಇದು ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಾಗಿದೆ. ಮರಾಠಿ ಪುಂಡರ ದಬ್ಬಾಳಿಕೆ ಹತ್ತಿಕ್ಕಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ತಾಯಿ ಭಾಷೆಯಾಗಿರುವಾಗ ಕರ್ನಾಟಕ ಬಸ್ಸಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕಂಡಕ್ಟರ್ ಮೇಲಿನ ಹಲ್ಲೆ ದುರದೃಷ್ಟಕರ. ಇಂಥ ಘಟನೆಗಳು ಕನ್ನಡ-ಮರಾಠಿಗರ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುವಂಥದ್ದಾಗಿದೆ. ಭಾಷಾ ಹೆಸರಿನಲ್ಲಿ ಸಾಮರಸ್ಯಕ್ಕೆ ಕುಂದು ಉಂಟು ಮಾಡುತ್ತಿರುವ ಶಕ್ತಿಗಳಿಗೆ ತಕ್ಕ ಪಾಠ ಆಗಬೇಕಿದೆ.
ಕನ್ನಡಿಗ ಬಸ್ ನಿರ್ವಾಹಕ ಮಹಾದೇವ ಅವರ ಮೇಲೆ ಹಲ್ಲೆಯ ಬೆನ್ನಲ್ಲೆ, ಸಂಚಿನಿಂದ ಫೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರ ಕುರಿತು ಉನ್ನತಮಟ್ಟದ ತನಿಖೆಯಾಗಬೇಕು ಮತ್ತು ದಾಳಿ ನಡೆಸಿದ ಪುಂಡರ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತುರ್ತಾಗಿ ಈ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಕೈಕೊಳ್ಳಬೇಕೆಂದು ಮತ್ತು ಹಲ್ಲೆಗೊಂಡ ನಿರ್ವಾಹಕನಿಗೆ ರಕ್ಷಣೆ ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಫೆ. 22ರಂದು ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ‌್ಯಕಾರಿ ಸಮಿತಿ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಪದಾಧಿಕಾರಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಂಕರ ಕುಂಬಿ, ಡಾ. ಸಂಜೀವ ಕುಲಕರ್ಣಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಅ. ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ ಇದ್ದರು.