ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ದಿವ್ಯಾಗೆ ಚಿನ್ನ

ನವದೆಹಲಿ, ಫೆ.20- ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೂರನೇ ದಿನ ಗುರುವಾರ ಭಾರತದ ದಿವ್ಯಾ ಕಕ್ರನ್ 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತ ಈ ವರೆಗೆ ಎರಡು ಚಿನ್ನ ಸೇರಿದಂತೆ ಆರನೇ ಪದಕ ಪಡೆದಿದೆ. ದಿವ್ಯಾ ಅವರ ತೂಕ ವಿಭಾಗದಲ್ಲಿ ಒಟ್ಟು ಐದು ಕುಸ್ತಿಪಟುಗಳು ಅಖಾಡದಲ್ಲಿದ್ದರು. ದಿವ್ಯಾ ತನ್ನ ನಾಲ್ಕು ಪಂದ್ಯಗಳನ್ನು ಗೆದ್ದರು ಮತ್ತು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

68 ಕೆಜಿ ತೂಕ ವಿಭಾಗದಲ್ಲಿ ದಿವ್ಯಾ 6-4ರಿಂದ ಜಪಾನಿನ ಆಟಗಾರ್ತಿ ನರುಹಾ ಮಾಟ್ಸುಯುಕಿಯನ್ನು ಸೋಲಿಸಿ ಚಿನ್ನ ಗೆದ್ದರು. ಭಾರತೀಯ ಮಹಿಳಾ ಕುಸ್ತಿಯ ಇತಿಹಾಸವನ್ನು ನೋಡಿದರೆ, ಏಷ್ಯನ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದಲ್ಲಿ ಇದು ಭಾರತದ ಎರಡನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಭಾರತದ ನವಜೋತ್ ಕೌರ್ ಹಿರಿಯ ಏಷ್ಯನ್ ಚಾಂಪಿಯನ್‌ಶಿಪ್ 2018 ಕಿರ್ಗಿಸ್ತಾನ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

  ದಿವ್ಯಾ ತನ್ನ ಮೊದಲ ಸುತ್ತಿನಲ್ಲಿ 6–0ರಲ್ಲಿ ಕಜಕಿಸ್ತಾನದ ಅಲ್ಬಿನಾ ಕಾರ್ಗೆಲ್ಡಿನೋವಾ, ಎರಡನೇ ಸುತ್ತಿನಲ್ಲಿ ಮಂಗೋಲಿಯಾ ಕುಸ್ತಿಪಟು ಡಾಲ್ಗೆರ್ಮಾ ಎನ್‌ಖ್ಸೈಖಾನ್, ಮೂರನೇ ಸುತ್ತಿನಲ್ಲಿ 8–0ರಲ್ಲಿ ಉಜ್ಬೇಕಿಸ್ತಾನ್‌ನ ಅಜೌಡಾ ಎಸ್ಬಾಗೆನೋವಾ ಮತ್ತು ನಾಲ್ಕನೇ ಸುತ್ತಿನಲ್ಲಿ ಜಪಾನ್‌ನ ನರುಹಾ ಮಾಟ್ಸುಯುಕಿ ಅವರನ್ನು 6–0ರಿಂದ ಸೋಲಿಸಿದರು.