ಬೆಂಗಳೂರು, ಜೂನ್.6, ರಾಜ್ಯಸಭೆಗೆ ಸ್ಪರ್ಧಿಸುವುದು ಹಾಗೂ ಪಕ್ಷದಿಂದ ಬಿ.ಫಾರಂ ಸಿಗುವುದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಅನಿರೀಕ್ಷಿತವೇನಾಗಿರಲಿಲ್ಲ. ಅವರು ನಿರೀಕ್ಷಿಸಿದಂತೆಯೇ ರಾಜ್ಯಸಭೆಗೆ ಹೈಕಮಾಂಡ್ ಅವರನ್ನು ಪರಿಗಣಿಸಿದೆ. ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕೆಲವು ಕಾರಣಗಳಿಂದಾಗಿ ಮಲ್ಲಿಕಾರ್ಜುನ ಖರ್ಗೆ ಪರಾಜಯಗೊಂಡರೂ ಸಹ ಅವರಲ್ಲಿ ಪಕ್ಷ ಸಂಘಟನೆಯ ಉತ್ಸಾಹವೇನು ಕಡಿಮೆಯಾಗಲಿಲ್ಲ. ಕೇಂದ್ರದ ವಿರುದ್ಧ ಸೆಣಸಾಡಬೇಕೆಂಬ ಜಿದ್ದಿನಿಂದಲೇ ಮಹಾರಾಷ್ಟ್ರ ಚುನಾವಣೆಯಲ್ಲಿ ಖರ್ಗೆ ಸಾಕಷ್ಟು ದುಡಿದರು. ಪಕ್ಷಕ್ಕೆ ಬಲವನ್ನು ತಂದುಕೊಟ್ಟರು. ಮಹಾರಾಷ್ಟ್ರದಿಂದಲೇ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಉದ್ಭವ್ ಠಾಕ್ರೆ ಮತ್ತು ಕಾಂಗ್ರೆಸ್ ನಾಯಕರು ಉತ್ಸಾಹ ತೋರಿದ್ದರಾದರೂ ಅಧಿನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಖರ್ಗೆ ಅವರಿಗೆ ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಪ್ರವೇಶಿಸುವುದಿಲ್ಲ ಎಂದು ಖರ್ಗೆ ಹೇಳಿದ್ದರಂತೆ. ಹೀಗಾಗಿ ಅಂದೇ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿಕೊಡುವ ಭರವಸೆ ಖರ್ಗೆ ಅವರಿಗೆ ಸಿಕ್ಕಿತ್ತು. ಹೀಗಾಗಿ ಮಹಾರಾಷ್ಟ್ರದ ಮೇಲಿನ ಋಣಸಂದಾಯ ಮಾಡಲು ಈಗ ಕರ್ನಾಟಕದಿಂದ ಬಿ.ಫಾರಂ ನೀಡಲಾಗಿದೆ.ಗಮನಾರ್ಹ ವಿಷಯವೂ ಮತ್ತೊಂದಿದೆ. ಅದು ಬಿ.ಕೆ.ಹರಿಪ್ರಸಾದ್ ಅವರನ್ನು ಬಿಟ್ಟು ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಒಪ್ಪಿ ಮುದ್ರೆ ಒತ್ತಿದ್ದು. ಈ ಇಬ್ಬರು ಒಮ್ಮತದಿಂದ ಖರ್ಗೆ ಅವರ ಹೆಸರನ್ನು ಮುನ್ನಲೆಗೆ ತಂದಿದ್ದು ಹೈಕಮಾಂಡ್ ಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಅನಾಯಸವಾಗಿದೆ ಎನ್ನಲಾಗಿದೆ.