ಬೆಳಗಾವಿ 23: ಇಂದಿನ ಟಿ.ವ್ಹಿ, ಮೊಬೈಲ್‌ಗಳ ಹಾವಳಿಯಲ್ಲಿ ಅನೇಕ ದೇಶಿಯ ಕಲೆಗಳು ಮಾಯವಾಗುತ್ತಿವೆ. ಮುಂದಿನ ಪೀಳಿಗೆಗೆ ಇವುಗಳ ಪರಿಚಯ ಮಾಡಿಸುವುದು ಇಂದಿನ ಅಗತ್ಯವಾಗಿದೆ.
ಡೊಳ್ಳು ಬಾರಿಸುವದು, ಡೊಳ್ಳಿನ ಹಾಡುಗಳು, ಲಾವಣಿಪದ, ಜನಪದ ಹಾಡು, ಭಜನಾ ಪದ, ಹಲಗೆ ಮಜಲು, ಕರಡಿ ಮಜಲು, ಸುಗ್ಗಿ ಹಾಡು ಮುಂತಾದವುಗಳು ಇಂದು ವಿರಳವಾಗುತ್ತಿವೆ. ಇಂದಿನ ಯಾಂತ್ರಿಕ ಒತ್ತಡದ ಬದುಕು, ಟಿ.ವ್ಹಿ, ಮೊಬೈಲ್‌ಗಳ ಹಾವಳಿಯಲ್ಲಿ ಸ್ಥಳೀಯ ಕಲೆ, ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ.
ಇಂಥ ಸ್ಥಿತಿ ನಡುವೆಯೂ ಕೆಲ ಕಲಾವಿದರು ದೇಶಿ ಕಲೆಯನ್ನು ಪೋಷಿಸಿ ಬೆಳೆಸುತ್ತಿದ್ದಾರೆ. ಅಂಥ ವಿರಳ ಕಲೆಯಲ್ಲಿ ಡೊಳ್ಳು ಬಾರಿಸುವಿಕೆ ವಿಶಿಷ್ಟ ಕಲೆಯನ್ನು ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ರೇಣುಕಾದೇವಿ ಡೊಳ್ಳಿನ ಸಂಘದವರು ಈ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಗ್ರಾಮದ ದಿ. ಸಣ್ಣಸಿದ್ದಪ್ಪ ಪಟಾಯತ, ದಿ ದೊಡ್ಡಸಿದ್ದಪ್ಪ ಪಟಾಯತ ಇವರು ಈ ಕಲೆಯಲ್ಲಿ ಪರಿಣಿತರಾಗಿದ್ದರು. ಮುಂದಿನ ಜನಾಂಗಕ್ಕೆ ಈ ಕಲೆ ಮುಂದುವರಿಸಬೇಕೆಂದು ಇತರರಿಗೆ ಕಲಿಸ ತೊಡಗಿದರು. ಅದರ ಫಲವಾಗಿಯೇ ಶ್ರೀ ರೇಣುಕಾದೇವಿ ಡೊಳ್ಳಿನ ಸಂಘದ ಸದಸ್ಯರು ಕಲಿತು ಪರಿಣಿತರಾದರು. ಸುಮಾರು 30-40 ವರ್ಷದಿಂದ ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.
ಲಕ್ಷ್ಮಣ ಭೀಮಪ್ಪ ಗೋಡಿಕಟ್ಟಿ, ಶಂಕರ ಹಣಮಂತ ಮಲಕನ್ನವರ, ಪರಸಪ್ಪ ಸಣ್ಣಸಿದ್ದಪ್ಪ ಪಟಾಯತ, ಭೀಮಶಿ ನಿಂಗಪ್ಪಾ ಗಂಗಾಣಿ, ಪ್ರತಾಪ ಲಕ್ಷ್ಮಣ ಕಾಳ್ಯಾಗೋಳ, ಭರಮಪ್ಪ ದಾನಪ್ಪ ಗೋಕಾಕ ಇವರೇ ಡೊಳ್ಳು ಬಾರಿಸುವ ಕಲೆಯಲ್ಲಿ ಪರಿಣಿತರಾಗಿದ್ದು ವಿವಿಧೆಡೆ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಹುಲಕುಂದ, ಮೇಲ್ಮಟ್ಟಿ, ಕೊಣ್ಣೂರ, ಧುಪದಾಳ, ಕಡಟ್ಟ, ಹಣಮಾಸೂರ, ಶಿವಾಪೂರ, ವಡ್ಡರಟ್ಟಿ ಸೇರಿದಂತೆ ಅನೇಕ ಕಡೆ ಕಲೆ ಪ್ರದರ್ಶಿಸಿದ್ದಾರೆ. ಶಿಂದಿಕುರಬೆಟ್ಟ ಚಾಂಗದೇವರ ಜಾತ್ರೆಯಲ್ಲೂ ತಮ್ಮ ಡೊಳ್ಳು ಬಾರಿಸುವ ಕಲೆ ಪ್ರದರ್ಶಿಸಿದ್ದಾರೆ.
ಮಾಯವಾಗುತ್ತಿರುವ ಇಂಥ ದೇಶಿ ಕಲೆಯ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡುವದು ಸರಕಾರದ ಕರ್ತವ್ಯವಾಗಿದೆ.