ಶೋಪಿಯಾನ್‌ನಲ್ಲಿ ಇಬ್ಬರು ಜೈಷ್‍-ಎ-ಮೊಹಮದ್‍ ಉಗ್ರರ ಬಂಧನ; ಶಸ್ತ್ರಾಸ್ತ್ರ,ಮದ್ದುಗುಂಡು ವಶ

ಶ್ರೀನಗರ, ಏಪ್ರಿಲ್ 20,ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಇಬ್ಬರು ಜೈಶ್-ಎ-ಮೊಹಮದ್ (ಜೆಎಂ) ಉಗ್ರರನ್ನು ಬಂಧಿಸಿ, ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಉಗ್ರರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ, ಶೋಪಿಯಾನ್‌ನ ವಾಚಿ ಪೆಟ್ರೋಲ್ ಬಳಿ ಪೊಲೀಸ್‍, 55 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್‌ನ 178 ಬೆಟಾಲಿಯನ್ ನ ಜಂಟಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ.
‘ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು, ಅವರನ್ನು ನಿಲ್ಲುವಂತೆ ಸೂಚಿಸಿದಾಗ ಶಂಕಿತರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ.
ಆದರೂ, ಭದ್ರತಾ ಪಡೆಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಭದ್ರತಾ ಪಡೆಗಳು ಬಂಧಿತರಿಂದ ಪಿಸ್ತೂಲ್ ಮತ್ತು ಎರಡು ಗ್ರೆನೇಡ್‍ಗಳನ್ನು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ವಾಚಿಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳ ದಾಳಿ ನಡೆಸಲು ಈ ಇಬ್ಬರು ಯೋಜಿಸಿದ್ದರು. ಕೊರೊನಾವೈರಸ್ ಹರಡುವಿಕೆ ತಡೆಗೆ ಲಾಕ್‌ಡೌನ್ ಜಾರಿಗೊಳಿಸಲು ಭದ್ರತಾ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.  ತಾವು ಜೆಎಂ ಸದಸ್ಯರೆಂದು ವಿಚಾರಣೆ ವೇಳೆ ಆರೋಪಿಗಳಿಬ್ಬರೂ ಹೇಳಿಕೊಂಡಿದ್ದಾರೆ. ಸಂಘಟನೆಯಿಂದ ತಮಗೆ ಇತ್ತೀಚೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. .ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.