ಅಕ್ರಮವಾಗಿ ಪಿಸ್ತೂಲ್‌ ಇಟ್ಟುಕೊಂಡಿದ್ದ ಆರೋಪಿಯ ಬಂಧನ: ಎರಡು ಪಿಸ್ತೂಲ್, ಜೀವಂತ ಗುಂಡು ವಶ

ಬೆಂಗಳೂರು,ಡಿ.28,ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್‌ ಇಟ್ಟುಕೊಂಡಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಕಾರವಾರ ಜಿಲ್ಲೆಯ ಅವರಗುಪ್ಪದ ಶೇಖ್ ಮುಸ್ತಾಫ (20) ಬಂಧಿತ ಆರೋಪಿ. ಈತನಿಂದ ದೇಶಿ ನಿರ್ಮಿತ 2  ರಿವಾಲ್ವರ್‌ಗಳನ್ನು ಹಾಗೂ 2 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ  ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ. ಆರೋಪಿಯು ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಮುಂಬೈಗೆ ವಾಪಸ್ ಬಂದು ಅಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ನಿವಾಸಿ ಕಿಂಗ್‌ಮಯ ಎಂಬಾತ  ಪರಿಚಯವಾಗಿದ್ದ. ಆತನ ಬಳಿ 2 ಪಿಸ್ತೂಲುಗಳು ಇರುವುದನ್ನು ಗಮನಿಸಿದ್ದ. ಕಳೆದ ಡಿ.4 ರಂದು ಕಿಂಗ್‌ಮಯ ಮದ್ಯದ ಅಮಲಿನಲ್ಲಿ ಮಲಗಿದ್ದಾಗ ಆತನ ಬಳಿ ಇದ್ದ 2 ಪಿಸ್ತೂಲುಗಳನ್ನು ಕಳವು ಮಾಡಿಕೊಂಡು ಬಂದಿರುವುದಾಗಿ ಮುಸ್ತಫಾ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.ಒಂದು  ಪಿಸ್ತೂಲನ್ನು ನಾನು ಇಟ್ಟುಕೊಂಡು ಇನ್ನೊಂದನ್ನು ಲಾಡ್ಜ್‌ವೊಂದರಲ್ಲಿ ಇಟ್ಟಿರುವುದಾಗಿ ಆತ ತಿಳಿಸಿದ್ದು, ಪಿಸ್ತೂಲುಗಳನ್ನು ಇಟ್ಟುಕೊಂಡು ಗುಂಪು ಕಟ್ಟಿ ಸುಲಿಗೆ ಹಾಗೂ ದರೋಡೆ  ಮಾಡಲು ಮುಂದಾಗಿದ್ದ ಆರೋಪಿಯು ಲಾಡ್ಜ್‌ನಲ್ಲಿಟ್ಟಿದ್ದ ಪಿಸ್ತೂಲ್ ಹಾಗೂ ಗುಂಡುಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಶಿವಾಜಿನಗರದ ಬ್ರಾಡ್‌ವೇ ರಸ್ತೆಯಲ್ಲಿ  ಯುವಕನೊಬ್ಬ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ  ಇನ್ಸ್‌ಪೆಕ್ಟರ್ ಸಿದ್ದರಾಜ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದೆ.