ಬೆಂಗಳೂರು, ಜ 29, ಇತ್ತೀಚೆಗೆ ನಡೆದ ರೌಡಿಶೀಟರ್ ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಭತ್ತು ಜನರನ್ನು ಬಂಧಿಸಿದ್ದಾರೆ. ಹೇಮಂತ್ (25), ಸಾಗರ್ (22), ಪ್ರವೀಣ್ (22), ಸಂದೇಶ್ (22) ಹಾಗೂ ತೇಜಸ್ (22) ಸೇರಿ ಒಂಭತ್ತು ಮಂದಿ ಬಂಧಿತ ಆರೋಪಿಗಳು. ವೈಷಮ್ಯದ ಹಿನ್ನೆಲೆಯಲ್ಲಿ ಲೋಕೇಶ್ ನನ್ನು ಕೊಲೆಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಮೃತ ಲೋಕೇಶ್, ಆರೋಪಿ ಹೇಮಂತ್ ವಿರುದ್ಧ ಅಕೌಂಟ್ ಓಪನ್ ಮಾಡಿ ಫೇಸ್ ಬುಕ್ ನಲ್ಲಿ ಅಸಭ್ಯ, ಅವಾಚ್ಯವಾಗಿ ಬರೆದು ಪೋಸ್ಟರ್ ಗಳನ್ನು ಹಾಕಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ, ದ್ವೇಷಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಹೇಮಂತ್, ಲೋಕೇಶ್ ನನ್ನು ಹತ್ಯೆ ಮಾಡಲು ಸಂಚೂ ರೂಪಿಸಿದ್ದನು.ಇದೇ ತಿಂಗಳ 22ರಂದು ರಾತ್ರಿ ಹೇಮಂತ್ ಸಹಚರರು ಕೂಡಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಲೋಕೇಶ್ ನನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಒಂಭತ್ತು ಜನರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ.