ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದವರ ಬಂಧನ

ಬೆಂಗಳೂರು.ಏ 3, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಹೆಣ್ಣೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಸುಹೇಲ್ ಬಾಷಾ, ಮೊಹಮ್ಮದ್ ಮುಸ್ತಾಫ್, ಸಗೀರ್ ಶರೀಫ್, ಸರ್ಫರಾದ್ ಹಡ್ಪಾ ಹಾಗೂ ಅನ್ಸಾರ್ ಜಬ್ಬಾರ್​​ ಬಂಧಿತ ಆರೋಪಿಗಳು.ಕೊರೊನಾ ಭೀತಿ ಹಿನ್ನೆಲೆಯಲ್ಲಿ ನರ್ಸ್, ಆಶಾಕಾರ್ಯಕರ್ತೆಯರು ನೆಗಡಿ,  ಕೆಮ್ಮು, ಜ್ವರ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಲು ಬುಧವಾರ ಸಾಧಿಕ‌ ಲೇಔಟ್ ಗೆ  ತೆರಳಿದಾಗ ತಮ್ಮ ಮೇಲೆ ಹಲ್ಲೆ ಮಾಡಿ, ನಂತರ ತಮ್ಮ ಬಳಿ ಇದ್ದ ವರದಿಯನ್ನು ದುಷ್ಕರ್ಮಿಗಳು  ಹರಿದು ಹಾಕಿದ್ದಲ್ಲದೇ,ತಮ್ಮ ಮೊಬೈಲ್ ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರಾ  ಕರೆಯಿರಿ ಎಂದು ಆವಾಜ್ ಹಾಕಿದ್ದಾರೆ. ಅಲ್ಲದೇ, ತಮಗೆ ಯಾವುದೇ ಮಾಹಿತಿ,‌ ಮೊಬೈಲ್ ಸಂಖ್ಯೆ  ನೀಡದಂತೆ ಮಸೀದಿಯ ಮೈಕ್ ನಲ್ಲಿ  ಅನೌನ್ಸ್ ಮಾಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಆರೋಪಿಸಿದರು.ಈ  ಸಂಬಂಧ ಸಾರಾಯಿ ಪಾಳ್ಯದ 50 ರಿಂದ 60 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಗ್ಯ  ಇಲಾಖೆ ಹಿರಿಯ ಹೆಲ್ತ್ ಇನ್ಸಪೆಕ್ಟರ್ ದೂರಿನ ಅನ್ವಯ  ಐವರ ವಿರುದ್ಧ ಎಫ್​ಐಆರ್​  ದಾಖಲಾಗಿದೆ.