ಜೂನ್ 8 ರಿಂದ ಧರ್ಮಸ್ಥಳ, ಮಹದೇಶ್ವರ, ದೇವಲಗಾಣಗಾಪುರ ಮತ್ತಿತರ ದೇವಾಲಯಗಳಲ್ಲಿ ದರ್ಶನಕ್ಕೆ ವ್ಯವಸ್ಥೆ

ಬೆಂಗಳೂರು, ಜೂ 6,ಲಾಕ್ ಡೌನ್ ನಿಂದಾಗಿ ಕಳೆದ 70 ದಿನಗಳಿಂದ ಮುಚ್ಚಿದ್ದ ದೇವಸ್ಥಾನಗಳು ಇದೇ 8 ರಿಂದ ತೆರೆಯುತ್ತಿದ್ದು, ಇದಕ್ಕಾಗಿ ಎಲ್ಲೆಡೆ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಚಾಮರಾಜನಗರದ ಮಲೈಮಹದೇಶ್ವರ, ಮೈಸೂರಿನ ಚಾಮುಂಡೇಶ್ವರಿ, ಕಲಬುರಗಿಯ ದೇವಲಗಾಣಗಾಪುರ ಸೇರಿದಂತೆ ಹಲವು ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಧರ್ಮಸ್ಥಳದಲ್ಲಿ ಈ ತಿಂಗಳ ೮ ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಜತೆಗೆ ಯಾತ್ರಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಸಹ ಇರಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಕೊರೋನಾ ಸೋಂಕು ತಗುಲದ ರಾಜ್ಯದ ಏಕೈಕ ಹಸಿರು ಜಿಲ್ಲೆ ಚಾಮರಾಜನಗರದ ಮಲೈ ಮಹದೇಶ್ವರ ದೇವಸ್ಥಾನದಲ್ಲೂ ನಿಯಂತ್ರಣ ಕ್ರಮಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ವ್ಯಕ್ತಿಗತ ಅಂತರ ಕಾಯ್ದುಕೊಂಡು ದರ್ಶನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನ ನೀಡಲು ಮುಂದಾಗಿದ್ದು, ದತ್ತನ ಸನ್ನಿಧಿಯಲ್ಲಿ ಸಕಲ ಸಿದ್ಧತೆ ನಡೆದಿದೆ.ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ನಿಯಮಗಳನ್ನು ಹೊರಡಿಸಿದ್ದು, ಅದರಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇವಸ್ಥಾನದ ಪ್ರಾಂಗಣದಲ್ಲಿ ಚೌಕಾಕೃತಿ ರಚನೆ ಮಾಡಲಾಗುತ್ತಿದೆ. ಅಲ್ಲದೇ, ಕೇವಲ ಬೆಳಿಗ್ಗೆ ಹಾಗೂ ಸಂಜೆ ಪಾಳಿಯಲ್ಲಿ ಮಾತ್ರ  ದರ್ಶನಕ್ಕೆ  ಅವಕಾಶ ಕಲ್ಪಿಸಲಾಗುತ್ತಿದೆ.