ಕೊರೋನಾ ಸೇನಾನಿಗಳಿಗೆ ಸಶಸ್ತ್ರ ಪಡೆಗಳ ಗೌರವ; ಶಾ, ರಾಜನಾಥ್ ಶ್ಲಾಘನೆ

ನವದೆಹಲಿ, ಮೇ 3,ದೇಶಾದ್ಯಂತ ಕೋವಿಡ್ ಸೇನಾನಿಗಳಿಗೆ ಹೂಮಳೆ ಸುರಿಸಿ ಗೌರವ ತೋರಿದ ಭಾರತೀಯ ಸೇನಾ ಪಡೆಗಳ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಧನ್ಯವಾದ ಸಮರ್ಪಿಸಿದ್ದಾರೆ ಭಾರತೀಯ ಸೇನೆ, ಭಾರತೀಯ ನೌಕಾ ಪಡೆ ಮತ್ತು ಭಾರತೀಯ ವಾಯು ಪಡೆಗಳು ಭಾನುವಾರ ದೆಹಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಬಳಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವರಿಗೆ ಗೌರವ ತೋರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ದೇಶವನ್ನು ಕೊರೋನಾ ಮುಕ್ತವಾಗಿಸುವತ್ತ ಹಗಲು ರಾತ್ರಿ ಕೆಲಸ ಮಾಡುತ್ತಿರುವ ವೈದ್ಯರು, ಪೊಲೀಸರು, ಅರೆ ಸೇನಾಪಡೆಗಳೂ ಮತ್ತು ಇತರ ಸೇನಾನಿಗಳಿಗೆ ಭಾರತೀಯ ಸೇನಾ ಪಡೆ ಗೌರವ ತೋರಿರುವುದು ಹೃದಯಸ್ಪರ್ಶಿಯಾಗಿದೆ ಎಂದಿದ್ದಾರೆ. ಕೊರೋನಾ ಸೇನಾನಿಗಳಿಗೆ ಇಡೀ ದೇಶವೇ ಸಲ್ಯೂಟ್ ಮಾಡುತ್ತಿದೆ. ಮೋದಿ ಸರ್ಕಾರ ಮತ್ತು ನಾನು ಮತ್ತು ಇಡೀ ದೇಶವೇ ನಿಮ್ಮೊಂದಿಗೆ ನಿಂತಿದೆ ಎಂದು ಭರವಸೆ ನೀಡುತ್ತಿದೆ. ನಾವು ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿ ದೇಶವನ್ನು ಕೊರೋನಾ ಮುಕ್ತವಾಗಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಬೇಕಿದೆ' ಎಂದು ಅವರು ಟ್ವೀಟ್  ಮಾಡಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್, ವೈದ್ಯಕೀಯ ವೃತ್ತಿಪರರು, ಪೊಲೀಸರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಸೇನಾ ಪಡೆಗಳು ತೋರಿಸಿದ ಗೌರವಕ್ಕೆ ಧನ್ಯವಾದಗಳು ಎಂದಿದ್ದಾರೆ.ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವವರಿಗೆ ಸೇನಾ ಪಡೆ ವೈಮಾನಿಕ ಗೌರವ ಸಲ್ಲಿಸಿದೆ. ಇಡೀ ದೇಶವೇ ಅವರ ಜೊತೆಗಿದೆ ಎಂದು ಹೇಳಿದ್ದಾರೆ.