ಕೊಪ್ಪಳ 19: ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಅಲೆಮಾರಿ ಅಭಿವೃದ್ಧಿ ಕೋಶದಿಂದ ಜಮೀನು ನೀಡುವ ಕಾರ್ಯಕ್ರಮಕ್ಕೆ ಭೂ ಮಾಲೀಕರಿಂದ ಭೂಮಿ ಖರೀದಿಸಲು ಜಿಲ್ಲಾಡಳಿತ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರವು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕೊಪ್ಪಳ ಜಿಲ್ಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.
ವಿಶೇಷವಾಗಿ ಈ ಸಮುದಾಯದ ಭೂ ರಹಿತ ಕೃಷಿ ಕಾಮರ್ಿಕ ಮಹಿಳೆಯರಿಗೆ ಅಲೆಮಾರಿ ಅಭಿವೃದ್ಧಿ ಕೋಶದ ವತಿಯಿಂದ ಭೂ ಒಡೆತನ ಯೋಜನೆಯಲ್ಲಿ 2018-19ನೇ ಸಾಲಿನಲ್ಲಿ ಆಯ್ಕೆಯಾಗಿರುವ ಒಟ್ಟು 280 ಫಲಾಪೇಕ್ಷಿಗಳಿಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 34 ಜನ ಭೂ ಮಾಲೀಕರಿಂದ 280 ಎಕರೆ ತರಿ ಮತ್ತು ಭಾಗಾಯ್ತು ಜಮೀನುಗಳನ್ನು ಖರೀದಿಸಲು ಜಿಲ್ಲಾಡಳಿತವು ಸೆಪ್ಟೆಂಬರ್. 23 ರಂದು ಅನುಮೋದನೆ ನೀಡಿ ಭೂ ಖರೀದಿ ಮಂಜೂರಾತಿಗಾಗಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಜಿಲ್ಲಾಡಳಿತದ ಪ್ರಸ್ತಾವನೆಗಳನ್ನು ಸರ್ಕಾರವು ಪರಿಗಣಿಸಿ 280 ಫಲಾಪೇಕ್ಷಿಗಳ ಪೈಕಿ 83 ಜನರಿಗೆ ಮಂಜೂರಾತಿ ಆದೇಶವನ್ನು ಹೊರಡಿಸಿ ಜಿಲ್ಲೆಗೆ ರೂ. 12,48,50,000/- ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ. ಮಂಜೂರಾತಿ ಆದೇಶ ಬಂದಿರುವ 84 ಜನ ಫಲಾಪೇಕ್ಷಿಗಳಿಗೆ ಶೀಘ್ರದಲ್ಲಿ ಜಮೀನು ನೋಂದಣಿಗೆ ಕ್ರಮವಹಿಸಲಾಗುವುದು. ಉಳಿದ 196 ಫಲಾಪೇಕ್ಷಿಗಳ ಮಂಜೂರಾತಿ ಆದೇಶವನ್ನು ಶೀಘ್ರದಲ್ಲಿ ಪಡೆಯಲಾಗುವುದು. ಪ್ರತಿ ಫಲಾಪೇಕ್ಷಿಗೆ 1 ಎಕರೆ ತರಿ ಮತ್ತು ಭಾಗಾಯ್ತು ಜಮೀನನ್ನು ನೀಡಲಾಗುತ್ತಿದ್ದು ಭೂಮಿ ಖರೀದಿಗೆ ತಗುಲುವ ವೆಚ್ಚದಲ್ಲಿ ಶೇ. 50 ರಷ್ಟು ಸಹಾಯಧನ ಶೇ. 50 ರಷ್ಟು ಸಾಲವಿರುತ್ತದೆ. ಸಾಲವನ್ನು 10 ವರ್ಷದ ಕಾಲದ ಮಿತಿಯಲ್ಲಿ ಶೇ. 4 ರಷ್ಟು ಬಡ್ಡಿದರದಲ್ಲಿ ಫಲಾಪೇಕ್ಷಿಯು ಸರ್ಕಾರಕ್ಕೆ ಸಾಲ ತಿರುವಳಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.