ತುಮಕೂರು: ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದು ಹೊಸ ವಿಚಾರ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿನ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತುಮಕೂರಿನಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ಕಟುವಾಗಿ ಟೀಕಿಸಿದ ಅವರು, ನಾವು ಬಡವರ ಹಣ ಲೂಟಿ ಮಾಡಿಲ್ಲ. ಜನರಿಗೆ ಒಳ್ಳೆಯ ಕೆಲಸ ಮಾಡುವಾಗ ಸಣ್ಣ ಲೋಪ ಆಗಿರಬಹುದು. ನಾನು ಬ್ಯಾಂಕಿನ ಅಧ್ಯಕ್ಷ ಆಗುವ ವೇಳೆ ಕೇವಲ 3 ಕೋಟಿ ಠೇವಣಿ ಇತ್ತು. ಈಗ 1 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಿದರು. ರಾಜಣ್ಣನಿಂದ ಸೋತಿದ್ದೇನೆ ಎಂದು ದೇವೇಗೌಡರು ದ್ವೇಷ ಸಾಧಿಸುತ್ತಿದ್ದಾರೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಈ ರೀತಿ ದ್ವೇಷ ಸಾಧಿಸುತ್ತಿದ್ದಾರೆ.
ದೇವೇಗೌಡರು ಹಾಗೂ ನಮ್ಮ ಜಿಲ್ಲೆಯ ಜೀರೋ ಟ್ರಾಫಿಕ್ ಮಂತ್ರಿ ಇದಕ್ಕೆಲ್ಲ ನೇರಹೊಣೆ ಎಂದು ಪರೋಕ್ಷವಾಗಿ ಪರಮೇಶ್ವರ್ ಹೆಸರು ಹೇಳದೆ ಟೀಕಿಸಿದರು. ಈ ರೀತಿ ದ್ವೇಷ ಸಾಧಿಸುವುದು ಯಾರಿಗೂ ಗೌರವ ತರುವಂತಹ ವಿಚಾರ ಅಲ್ಲ. ಬೇಕಿದ್ದರೆ ತಮ್ಮನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲಿ ಎಂದು ಸವಾಲು ಹಾಕಿದರು. ಸಚಿವ ಎಚ್ ಡಿ ರೇವಣ್ಣ ಅವರು ಕೆಎಂಎಫ್ ನಲ್ಲಿ ಸಾಕಷ್ಟು ಹಗರಣ ನಡೆಸಿದ್ದಾರೆ. ಝೀರೋ ಟ್ರಾಫಿಕ್ ಮಂತ್ರಿ ಕೂಡ ಸೂಪರ್ ಸೀಡ್ ತನಿಖೆಗೆ ಸಹಿ ಮಾಡಿದ್ದಾರೆ ಎಂದು ಹರಿಹಾಯ್ದರು. ಪರಮೇಶ್ವರ್ ಒಡೆತನದ ಸಿದ್ದಾರ್ಥ ವಿದ್ಯಾಸಂಸ್ಥೆಗಳಲ್ಲಿ ಸಾಕಷ್ಟು ಹಗರಣ ನಡೆದಿದೆ. ಬೇಗೂರು ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪಡೆದು ಬ್ಯಾಂಕ್, ಕಾಲೇಜು ನಿರ್ಮಾಣ ಮಾಡಿದ್ದಾರೆ. ಈ ಜಾಗ ವಿಚಾರದಲ್ಲಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲರ ಬಗ್ಗೆ ತನಿಖೆ ನಡೆಸುವಂತೆ ಮಾಡುತ್ತೇನೆ ಎಂದು ಪರಮೇಶ್ವರ್ ಅವರಿಗೆ ರಾಜಣ್ಣ ಟಾಂಗ್ ನೀಡಿದರು. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಐಎಂಎ ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು. ರಾಜಕಾರಣಿಗಳು ಸೇರಿದಂತೆ ಸಚಿವರು, ಐಎಎಸ್ ಅಧಿಕಾರಿಗಳು ಐಎಂಎ ಮಾಲೀಕ ಮನ್ಸೂರ್ನಿಂದ ಸಾಕಷ್ಟು ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವಿದೆ, ತಕ್ಷಣವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಎಷ್ಟು ಜನ ಏನೇನು ಮಾಡಿದ್ದಾರೆ ಎಂಬುದು ಬಯಲಿಗೆ ಬರಲಿದೆ, ಇದರಿಂದ ಹಣ ಕಳೆದುಕೊಂಡ ಸಾವಿರಾರು ಕಡು ಬಡವರಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ಹೇಳಿದರು.
ಎಚ್ ಡಿ ಕುಮಾರಸ್ವಾಮಿ ಚುನಾವಣೆ ಮೊದಲು ರಾಜ್ಯದ ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿದ್ದರು, ಅಧಿಕಾರಕ್ಕೆ ಬಂದ ತಕ್ಷಣವೇ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು, ಆದರೆ ಮಾತಿನಂತೆ ರೈತರ ಸಾಲ ಮನ್ನಾ ಮಾಡದೆ ಕೇವಲ ಮೂಗಿಗೆ ತುಪ್ಪ ಸವರಿದ್ದಾರೆ, ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ, ಆದರೆ ನಾವು ಜಿಲ್ಲೆಯ ರೈತರಿಗೆ ಕಾಯ ವಾಚಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಸಾವಿರಾರು ಕೋಟಿ ಹಣವನ್ನು ರೈತರಿಗೆ ಸಾಲವಾಗಿ ನೀಡಲಾಗಿದೆ, ಆದರೆ ಯಾವುದೇ ಕಾರಣಕ್ಕೂ ಕಾನೂನನ್ನು ಉಲ್ಲಂಘನೆ ಮಾಡಿಲ್ಲ, ಬ್ಯಾಂಕಿನ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ, ಇದು ಕೇವಲ ದೇವೇಗೌಡರ ಸೋಲಿನ ಪರಿಣಾಮ ಇಷ್ಟೆಲ್ಲ ಅವಾಂತರಗಳು ಉಂಟಾಗಿವೆ ಎಂದು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಸಂಜೆಯ ವೇಳೆಗೆ ಈ ಸರ್ಕಾರ ಯಾವುದೇ ಕಾರಣಕ್ಕೂ ಇರುವುದಿಲ್ಲ, ಬ್ರಹ್ಮ ಬಂದು ಅಡ್ಡ ನಿಂತರೂ ಈ ಸರಕಾರ ಉಳಿಯುವುದಿಲ್ಲ, ಮುಂಬೈಯಲ್ಲಿರುವ ಅತೃಪ್ತರನ್ನು ಯಾವುದೇ ಕಾರಣಕ್ಕೂ ಕರೆತರಲು ಸಾಧ್ಯವಿಲ್ಲ, ಸಾಧ್ಯವಾದರೆ ಇಲ್ಲಿಂದಲೇ ಇನ್ನೂ ಬೇರೆ ಶಾಸಕರು ಹೋಗಲು ಸಿದ್ಧರಿದ್ದಾರೆ, ಆದರೆ ಅಂಥ ಶಾಸಕರ ಹೆಸರನ್ನು ಹೇಳುವುದಿಲ್ಲ ಎಂದು ಹೇಳಿದರು. ಕಳೆದ ಹದಿನೈದು ದಿನಗಳ ಹಿಂದೆ ಇಬ್ಬರು ಶಾಸಕರು, ನಂತರ ಹಲವು ಶಾಸಕರುಗಳು ರಾಜೀನಾಮೆ ನೀಡಿದ ನಂತರ ಈ ಸರ್ಕಾರ ಅಸ್ತಿತ್ವದಲ್ಲಿಯೇ ಇಲ್ಲ, ಹಾಗಿದ್ದರೂ ಕೂಡ ನಿರಂತರವಾಗಿ ವರ್ಗಾವಣೆ ದಂಧೆ ನಡೆಯುತ್ತಲೇ ಇದೆ, ಈಗಾಗಲೇ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟರೂ ಬಹುಮತವಿಲ್ಲದ ಮುಖ್ಯಮಂತ್ರಿ ನಿರಂತರವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ, ತಕ್ಷಣವೇ ಈಗ ನಡೆದಿರುವ ಎಲ್ಲ ವರ್ಗಾವಣೆಗಳನ್ನು ತಡೆಹಿಡಿಯಬೇಕೆಂದು ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಒತ್ತಾಯಿಸಿದರು ಇನ್ನು ಹತ್ತು ದಿನಗಳ ಒಳಗಾಗಿ ಮತ್ತೊಮ್ಮೆ ಡಿಸಿಸಿ ಬ್ಯಾಂಕಿನ ಸೂಪರ್ ಸ್ವೀಡ್ ಅನ್ನು ತೆಗೆದು ಮತ್ತೊಮ್ಮೆ ತಾವು ಅಧ್ಯಕ್ಷರಾಗಿ ಮುಂದುವರಿಯಲಿದ್ದೇನೆ, ಎಲ್ಲಾ ನಿರ್ದೇಶಕರೂ ಮುಂದುವರಿಯಲಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದರು.
ತುಮಕೂರಿನ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತರು ಎಂಬ ಕಾರಣಕ್ಕಾಗಿ ಜೀರೋ ಟ್ರಾಫಿಕ್ ಮಂತ್ರಿಯ ಕುತಂತ್ರದ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ, ಬ್ಯಾಂಕನ್ನು ಸೂಪರ್ ಸೀಡ್ ಮಾಡಿದ್ದಾರೆ, ಇದು ಕೇವಲ ಮೂರು ನಾಲ್ಕು ದಿನಗಳು ಮಾತ್ರ, ನನ್ನ ಹತ್ತು ದಿನಗಳ ಒಳಗಾಗಿ ಈ ಆದೇಶವನ್ನು ರದ್ದುಗೊಳಿಸಿ ಮತ್ತೊಮ್ಮೆ ನಾವು ಅಧಿಕಾರದಲ್ಲಿ ಮುಂದುವರಿಯುತ್ತೆ?ವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದವರು ತಿಳಿಸಿದರು, ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಿಲ್ಲೆಯಾದ್ಯಂತ ಜನರು ಹಾಗೂ ಅಭಿಮಾನಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿಗಳು ಪ್ರತಿಭಟನೆ ಮಾಡುವುದು ಬೇಡ, ಪ್ರತಿಭಟನೆ ಮಾಡುವುದಾದರೆ ಒಂದು ಗಂಟೆ ಹೆಚ್ಚು ಸಮಯ ಕೆಲಸ ಮಾಡುವ ಪ್ರತಿಭಟನೆಯನ್ನು ಹೊರಹಾಕಿ ಎಂದವರು ಕರೆ ನೀಡಿದರು.