ಬೆಂಗಳೂರು, ಮೇ 10,ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಎಚ್‌ಬಿಆರ್ ಬಡಾವಣೆಯ 57 ವರ್ಷದ ಮಹಿಳೆಯೊಬ್ಬರು ಕಲ್ಯಾಣನಗರದ ‘ನಾರ್ತ್ ಬೆಂಗಳೂರು ನರ್ಸಿಂಗ್ ಹೋಂ’ನಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಆದರೆ, ಈ ಮಹಿಳೆಗೆ ಕೊರೋನಾ ಸೋಂಕು ಇರುವುದು ಆಕೆ ಮೃತಪಟ್ಟ ನಂತರ ಪತ್ತೆಯಾಗಿದೆ. ಆಕೆಯ ಗಂಟಲ ದ್ರವದ ಪರೀಕ್ಷೆ ಮತ್ತು ಎಕ್ಸ್ ರೇ ವರದಿಗಳನ್ನು ಪರಿಶೀಲಿಸಿದಾಗ ಆಕೆಗೆ ಸೋಂಕು ಇರುವುದು ದೃಢಪಟ್ಟಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ನರ್ಸಿಂಗ್ ಹೋಂ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್ ಮಾಡಿದೆ.ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಈ ಮಹಿಳೆ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದಳು. ಅಲ್ಲಿ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಅವರು ಚಿಕಿತ್ಸೆ ನಿರಾಕರಿಸಿದ್ದರಿಂದ ನಂತರ ನಾರ್ತ್ ಬೆಂಗಳೂರು ನರ್ಸಿಂಗ್ ಹೋಂಗೆ ಶುಕ್ರವಾರ ರಾತ್ರಿ ಚಿಕಿತ್ಸೆಗಾಗಿ ದಾಖಲಾಗಿದ್ದರು.ಇದಕ್ಕೂ ಮುನ್ನ ಕ್ಲಿನಿಕ್ ಒಂದಕ್ಕೆ ಕೂಡ ಭೇಟಿ ನೀಡಿದ್ದರು ಎನ್ನಲಾಗಿದೆ. ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.