ಬೆಂಗಳೂರು, ಮಾ 27, ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಜೊತೆಗೆ, ಗುರುವಾರ ಸಂಜೆಯಿಂದ ಹತ್ತು ತಿಂಗಳ ಮಗು ಸೇರಿದಂತೆ ಒಟ್ಟು 7 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 62ಕ್ಕೇರಿಕೆಯಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟಿರುವ 60 ವರ್ಷದ ಧರ್ಮ ಪ್ರಚಾರಕರೋರ್ವರು ಮಾರ್ಚ್ 13ರಂದು ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇವರು ತುಮಕೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
24 ಜನರು ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದು, 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 8 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಉಳಿದ ಮೂವರು ಆರೋಗ್ಯ ಸಿಬ್ಬಂದಿಯಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ.ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡು ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಈ ಮಗು ಕೇರಳದಿಂದ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದು, ಯಾವುದೇ ವಿದೇಶಿ ಪ್ರಯಾಣದ ಹಿನ್ನೆಲೆಯಿರಲಿಲ್ಲ. ಈ ಮಗುವಿನ 6 ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚಲಾಗಿದ್ದು, ಗೃಹ ಬಂಧನದಲ್ಲಿರಿಸಲಾಗಿದೆ.ಕೊಲಂಬೋದಿಂದ ಮಾರ್ಚ್ 15ರಂದು ಆಗಮಿಸಿದ್ದ ಬೆಂಗಳೂರಿನ 20 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾ. 18ರಂದು ಲಂಡನ್ ಪ್ರಯಾಣ ಬೆಳೆಸಿದ್ದ 25 ವರ್ಷದ ಬೆಂಗಳೂರಿನ ಮಹಿಳೆಯೋರ್ವರಿಗೆ ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿಯ ಮನೆಕೆಲಸದವರೊಬ್ಬರು ಸೋಂಕಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಉತ್ತರ ಕನ್ನಡ ಜಿಲ್ಲೆಯ 22 ವರ್ಷದ ನಿವಾಸಿಯಲ್ಲಿ ಸೋಂಕು ದೃಢಪಟ್ಟಿದೆ.