ಪಾಕ್ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ: ಕೂಲಿಕಾರ್ಮಿಕ ಸಾವು

ಬಾರಾಮುಲ್ಲಾ, ಅ 5:   ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಹೊರ ಠಾಣೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಅಧಿಕೃತ ಮೂಲಗಳು ತಿಳಿಸಿವೆ.

ಪಾಕ್ ಸೈನಿಕರು ಶುಕ್ರವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ಮತ್ತು ಶೆಲ್ ದಾಳಿಗಳನ್ನು ನಡೆಸಿದ್ದಾರೆ ಎಂದು ಅವು ತಿಳಿಸಿವೆ. 

ಕೂಲಿ ಕಾರ್ಮಿಕರು ಕಾಮಲ್ಕೋಟ್ ಪ್ರದೇಶದ ಹೊರ ಠಾಣೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದಾಗ ಪಾಕ್ ಸೈನಿಕರು ಸಿಡಿಸಿದ ಶೆಲ್ವೊಂದು ಸ್ಫೋಟಗೊಂಡ ಪರಿಣಾಮ ಓರ್ವ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ. 

ಸ್ಫೋಟದಲ್ಲಿ ಇಬ್ಬರು ಸ್ಥಳೀಯ ಪೋರ್ಟರ್ಗಳು( ಕೂಲಿ ಕಾರ್ಮಿಕರು) ತೀವ್ರವಾಗಿ ಗಾಯಗೊಂಡಿದ್ದಾರೆ, ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ, ಅವರ ಪೈಕಿ ಓರ್ವ ಕೂಲಿ ಕಾರ್ಮಿಕ ಇಶ್ತಾಯಾಕ್ ಅಹ್ಮದ್ ಎಂಬವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಭಾರತೀಯ ಪಡೆಗಳು ಪ್ರತಿ ದಾಳಿ ನಡೆಸಿದ್ದು, ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ತಾನದ ಹೊರ ಠಾಣೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಆದಾಗ್ಯೂ. ಪಾಕಿಸ್ತಾನದ ಕಡೆಯಿಂದ ಉಂಟಾದ ಹಾನಿಯ ಬಗ್ಗೆ ತಕ್ಷಣ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. 

ಹಿಮಪಾತದಿಂದಾಗಿ ಒಳನುಸುಳುವಿಕೆ ಮಾರ್ಗಗಳು ಮುಚ್ಚುವ ಮೊದಲು ಲಾಂಚ್ಪ್ಯಾಡ್ನಲ್ಲಿರುವ ಉಗ್ರರು ಈ ಭಾಗಕ್ಕೆ ನುಸುಳಲು ನೆರವಾಗುವ ಉದ್ದೇಶದಿಂದ ಪಾಕಿಸ್ತಾನ ಪಡೆಗಳು 2003ರ ಕದನ ವಿರಾಮವನ್ನು ಉಲ್ಲಂಘಿಸುತ್ತಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. 

ಎಲ್ಒಸಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಸೈನಿಕರು ಈಗಾಗಲೇ ಮುನ್ನೆಚ್ಚರಿಕಾ ಕ್ರಮವಹಿಸಿದ್ದು, ಪಿಒಕೆ ಯಿಂದ ಯಾವುದೇ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ, ಅಲ್ಲಿ ಹೆಚ್ಚಿನ ಸಂಖ್ಯೆಯ ತರಬೇತಿ ಪಡೆದ ಉಗ್ರರು ಲಾಂಚ್ ಪ್ಯಾಡ್ನಲ್ಲಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.