ಬೆಂಗಳೂರು, ಮೇ 8, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ 'ಫ್ರಂಟ್ ಲೈನ್ ವಾರಿಯರ್ಸ್' ಎಂದೇ ಪ್ರಸಿದ್ಧಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ ಪ್ಯಾಕೇಜ್‍ನಲ್ಲಿ ಯಾವುದೇ ಸಹಾಯಧನ ಘೋಷಿಸದಿರುವುದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮಹಿಳಾ ವಿಭಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಈ ಕುರಿತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ತಲತ್ ಯಾಸ್ಮಿನ್ ಪತ್ರಿಕಾ ಹೇಳಿಕೆ ನೀಡಿದ್ದು, ಕೋವಿಡ್-19 ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವ ಮತ್ತು ವಿದೇಶದಿಂದ ಮತ್ತು ವಿವಿಧ ರಾಜ್ಯಗಳಿಂದ ಬಂದ ಜನಗಳ ಸರ್ವೆಯನ್ನು ಅವಿರತವಾಗಿ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಈ ಮೂಲಕ ಇಲಾಖೆಗೆ ಕೊರೊನಾ ಬಗ್ಗೆ ಮಾಹಿತಿ ನೀಡುವ ಪ್ರಥಮ ಮಾಹಿತಿದಾರರಾಗಿದ್ದಾರೆ.ಆಶಾ ಕಾರ್ಯಕರ್ತೆಯರು ಇಂಥ ಅಪಾಯಕಾರಿ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಈ ರೋಗಾಣು ಹರಡುವಿಕೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಆಶಾ ಕಾರ್ಯಕರ್ತೆಯರೂ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕೂಡಲೇ ಮಾಸಿಕ 10,000ದಂತೆ ಮಾರ್ಚ್ ತಿಂಗಳಿಂದ ನೀಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.