ಉತ್ತಮ ಆಡಳಿತ ನೀಡುವಲ್ಲಿ ಆಂಧ್ರ ಮುಖ್ಯಮಂತ್ರಿ ವಿಫಲ: ಪವನ್ ಕಲ್ಯಾಣ್

  ವಿಜಯವಾಡ, ಸೆ 14    ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಉತ್ತಮ ಆಡಳಿತ ನೀಡುವಲ್ಲಿ ನಾಲ್ಕೂ ನಿಟ್ಟಿನಿಂದ ವಿಫಲರಾಗಿದ್ದಾರೆ ಎಂದು ಜನಸೇನಾ ಪಕ್ಷದ ಅಧ್ಯಕ್ಷ ಕೆ ಪವನ್ ಕಲ್ಯಾಣ್ ಟೀಕಿಸಿದ್ದಾರೆ. 

  ಜಗನ್ ಮೋಹನ್ ರೆಡ್ಡಿ ಸರ್ಕಾರದ 100 ದಿನಗಳ ಪ್ರಗತಿ ವರದಿ ಕುರಿತು ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್, ಶತದಿನಗಳ ಆಡಳಿತ ಯಾವುದೇ ದಿಕ್ಸೂಚಿಯಿಲ್ಲ, ಪಾರದರ್ಶಕತೆಯಿಲ್ಲದ ಆಡಳಿತವಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. 

  ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೂಡಿಕೆ ಆಕರ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಮತ್ತು ತಪ್ಪು ಮರಳು ನೀತಿ ಜಾರಿಗೆ ತಂದು ನಿರ್ಮಾಣ ಚಟುವಟಿಕೆಗಳನ್ನು ಕುಂಠಿತಗೊಳಿಸಿದೆ ಎಂದರು. 

  ಪೋಲಾವರಂ ಯೋಜನಾ ಕಾರ್ಯಗಳು ಸ್ಥಗಿತಗೊಂಡಿದ್ದು, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮುಖ್ಯಮಂತ್ರಿ ಶೋಚನೀಯವಾಗಿ ವಿಫಲರಾಗಿದ್ದಾರೆ ಎಂದು ನುಡಿದರು. 

  ವೈಎಸ್ ಆರ್ ಪಿ ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ. 100 ದಿನಗಳ ಆಡಳಿತ ಸರಿಯಾದ ಯೋಜನೆ ಇಲ್ಲದೆ ನಡೆದಿದೆ ಈ  ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ಹೊಂದಿರಲಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.