ಹೈದರಾಬಾದ್ , ಮೇ 8, ವಿಷಾನಿಲ ಸೋರಿಕೆಯಿಂದ ಬಳಲುತ್ತಿರುವ ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 54 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಎರಡು ಸಂಕಷ್ಟಗಳನ್ನು ಸರ್ಕಾರ ಒಟ್ಟಿಗೆ ನಿಭಾಯಿಸಬೇಕಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1887ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸುತ್ತಿದ್ದು ಕಳೆದ ಮೂರು ದಿನಗಳ ಅವಧಿಯಲ್ಲಿ 10ಸಾವಿರ ಹೊಸ ಪ್ರಕರಣ ವರದಿಯಾಗಿದೆ.ಈ ಕುರಿತಂತೆ ಆಂಧ್ರಪ್ರದೇಶದ ನೋಡಲ್ ಅಧಿಕಾರಿ ಮಾಹಿತಿ ನೀಡಿದ್ದು , ಒಂದೇ ದಿನದಲ್ಲಿ 54 ಜನರಿಗೆ ಮಾರಕ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ ಎಂದರು. ರಾಜ್ಯದಲ್ಲಿ ಈವರೆಗೆ 1887 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು,ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಸೋಂಕಿನಿಂದ ಬಳಲುತ್ತಿದ್ದ 842 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದೂ ಅವರು ಹೇಳಿದರು.