ಪ್ರಾಚೀನ ಶಿಲ್ಪ ಮತ್ತು ಶಾಸನಗಳು ಜೀವನ ಮೌಲ್ಯಗಳ ಜೀವಕೋಶಗಳಾಗಿವೆ: ಹಂಜೆ

Ancient sculpture and inscriptions are cells of living values: Hanje

ಗದಗ 04 : ನಗರವು ಶೈವ, ವೈಷ್ಣವ, ಬೌದ್ಧ, ಜೈನ, ವೀರಶೈವ, ಲಿಂಗಾಯತ, ಇಸ್ಲಾಂ, ಕ್ರೈಸ್ತ ಮತ-ಪಂಥಗಳ ಸಾಮರಸ್ಯ ಕೇಂದ್ರವಾಗಿದ್ದು, ಈ ಪ್ರದೇಶದ ಸಂಸ್ಕೃತಿಯ ಜೀವಾಳವಾಗಿರುವ ಆ ಎಲ್ಲ ಮತ-ಪಂಥಗಳ ಅನುಯಾಯಿಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಹೊಂದಿದ್ದರು. ಅವರಿಗೆ ತಮ್ಮಕ್ಕಷ್ಟೆ ತಾವು ಬಾಳದೆ ಇತರರಿಗಾಗಿಯೂ ಬಾಳಬೇಕೆಂಬ ಅರಿವಿದ್ದಿತು. ಎಂತಲೇ ಅವರು “ಜೀವನವು ಕ್ಷಣಿಕವಾದುದು. ದಿನದಿನವೂ ಆಯುಸ್ಸು ಕ್ಷೀಣಿಸುತ್ತ ಹೋಗುತ್ತದೆ. ಹೀಗಿರುವಾಗ ಮನುಷ್ಯರು ಧರ್ಮವನ್ನು ಅವಲಂಬಿಸಿ ಸದ್ಗತಿ ಸಂಪಾದಿಸಿಕೊಳ್ಳಬೇಕು ಎಂಬ ಭಾವನೆಗೆ ಅನುಗುಣವಾಗಿ ನೆಮ್ಮದಿಯಿಂದ ಬಾಳಿದ್ದಾರೆ. ಎಲ್ಲರಿಗೂ ಸಮಾನವಾದ, ಎಲ್ಲ ಧರ್ಮಗಳೂ ಒತ್ತಿ ಹೇಳುವ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ ಎಂದು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು.  

ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ 1ನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ‘ಗದಗ ನಗರದ ಪ್ರಾಚೀನ ಶಿಲ್ಪಗಳು ಮತ್ತು ಶಾಸನಗಳು’ ವಿಷಯವನ್ನು ಅಧ್ಯಯನ ಕೈಗೊಳ್ಳಲು ಗದಗ ನಗರದಲ್ಲಿ ಕ್ಷೇತ್ರಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಮಾತನಾಡುತ್ತ ಕರ್ನಾಟಕದಲ್ಲಿ ಎರಡೂವರೆ ಸಾವಿರ ವರ್ಷಗಳಿಂದ ರೂಢಿಯಲ್ಲಿರುವ ಸಾರ್ಥಕ ಬದುಕಿನ ಅವಶ್ಯ ಗುರಿಗಳಾದ ಸರ್ವಕಾಲ-ಸರ್ವದೇಶಕ್ಕೂ ವ್ಯಾಪಕವಾದ ಸಾರ್ವಕಾಲಿಕ ಆದರ್ಶಗಳು ಮತ್ತು ಯಾವುದೋ ಒಂದು ಕಾಲ-ದೇಶ-ಜನಾಂಗಕ್ಕೆ ಸೀಮಿತವಾದ ಸಮಕಾಲೀನ ಮೌಲ್ಯಗಳು ಶಿಲ್ಪಗಳು ಮತ್ತು ಶಾಸನಗಳಲ್ಲಿ ಅಭಿವ್ಯಕ್ತವಾಗಿರುವಂತೆ ಬೇರಾವ ಮಾಧ್ಯಮಗಳಲ್ಲಿಯೂ ವ್ಯಕ್ತವಾಗಿಲ್ಲ. ಹೀಗಾಗಿ ಶಿಲ್ಪಗಳು ಮತ್ತು ಶಾಸನಗಳ ಸಾಂಸ್ಕೃತಿಕ ಮೌಲ್ಯಗಳ ಉಪೇಕ್ಷೆಯೆಂದರೆ ಅದು ನಮ್ಮ ಜೀವನ ಮೌಲ್ಯಗಳ ಉಪೇಕ್ಷೆ ಮಾಡಿದಂತೆಯೇ ಆಗುತ್ತದೆ. ಇವುಗಳ ಮೂಲಕವೇ ಅಂದಿನ ಪ್ರಭುಗಳು ಮತ್ತು ಪ್ರಜೆಗಳು ಮಾತನಾಡಿದ್ದಾರೆ. ಇವುಗಳಲ್ಲಿ ಅಕ್ಷರ ಮತ್ತು ಉಬ್ಬುಶಿಲ್ಪಗಳ ಮೂಲಕ ತಮ್ಮ ಆದರ್ಶಗಳು ಹಾಗೂ ಮಾನವೀಯ ಜೀವನ ಮೌಲ್ಯಗಳು ಶಾಶ್ವತವಾಗಿ ಉಳಿಯಲಿ, ಸಾಕ್ಷರಸ್ಥರು-ಅನಕ್ಷರಸ್ಥರು ಸೇರಿದಂತೆ ಎಲ್ಲರಿಗೂ ಅರ್ಥವಾಗಲಿ ಎಂಬ ಉದ್ದೇಶದಿಂದ ಆಕರ್ಷಕವಾಗಿ ಚಿತ್ರಿಸಿದ್ದಾರೆ ಎಂದು ಗದಗ ನಗರದ ತ್ರಿಕೂಟೇಶ್ವರ, ಸೋಮೇಶ್ವರ, ವೀರನಾರಾಯಣ ದೇವಾಲಯಗಳಲ್ಲಿ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿತ ಶಿಲ್ಪಗಳು ಮತ್ತು ಶಾಸನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. 

ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ರೋಹಿಣಿ ರಾಚನ್ನವರ ಮತ್ತು ಶ್ರೀ ಬಸವಂತೆಪ್ಪ ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ, ದಾಖಲೀಕರಣದ ಕುರಿತು ತಿಳಿಸುತ್ತ, ತಮ್ಮ ಗ್ರಾಮದಲ್ಲಿರುವ ಪ್ರಾಚೀನ ಶಿಲ್ಪಗಳು ಮತ್ತು ಶಾಸನಗಳು ತಮ್ಮ ಪೂರ್ವಜರ ಆದರ್ಶಗಳು ಮತ್ತು ಜೀವನ ಮೌಲ್ಯಗಳ ‘ಜೀವಕೋಶ'ಗಳಾಗಿದ್ದು, ಇವುಗಳ ಸಂರಕ್ಷಣೆಯೆಡೆಗೆ ಗಮನ ಹರಿಸಬೇಕೆಂದು ಹೇಳಿದರು.