ಕಲಬುರಗಿ, ಮಾ.31, ಕೊರೊನಾ ಸೋಂಕಿನಿಂದ ಮೃತರಾಗಿದ್ದ ಕಲಬುರಗಿಯ 76 ವರ್ಷದ ವೃದ್ಧನ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.76 ವರ್ಷದ ವಯೋವೃದ್ಧ ಇದೇ ತಿಂಗಳ 10 ರಂದು ವಯೋಸಹಜ ಜೊತೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು.
ಇದು ಕೊರೊನಾ ಸೋಂಕಿಗೆ ದೇಶದ ಮೊದಲ ಬಲಿಯಾಗಿದ್ದ ಹಿನ್ನೆಲೆಯಲ್ಲಿ ಕಲಬುರಗಿ ರೆಡ್ ಅಲರ್ಟ್ ಆಗಿ ಮಾರ್ಪಟ್ಟಿತ್ತು. ಮೃತನ ನೇರ ಸಂಪರ್ಕದಲ್ಲಿದ್ದ ಆತನ 45 ವರ್ಷದ ಮಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್ ನಲ್ಲಿಟ್ಟು ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗಿತ್ತು ಎಂದರು. ಚಿಕಿತ್ಸೆಯ 14 ದಿನಗಳ ನಂತರ ಈ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ ನಂತರ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.