ಅಮೃತ್ 2.0 ಯೋಜನೆಯ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆ

Amrit 2.0 Project District Level Advisory and Management Committee Meeting

ವಿಜಯಪುರ,ಫೆ.21: ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅಮೃತ್ 2.0 ಯೋಜನೆಯ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು.  

ಈ ಸಭೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಟ್ರೆಂಚ್ -1ರಲ್ಲಿ ಆರಂಭಗೊಂಡ ಕಾಮಗಾರಿಗಳನ್ನು ಮಾರ್ಚ್‌ 2025ರ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಗುತ್ತಿಗೆದಾರರಿಗೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು. 

ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಹಾಗೂ ಪುರಸಭೆ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆಗಾಗಿ ಉಪಯೋಗಿಸುತ್ತಿರುವ ಯಂತ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ದುರಸ್ಥಿ ಇದ್ದರೆ ಆದ್ಯತೆ ಮೇರೆಗೆ  ಕ್ರಮ ವಹಿಸಬೇಕು. ನೀರು ಪೋಲಾಗದಂತೆ ನಿಗಾ ವಹಿಸಬೇಕು. ನಿಯಮಿತವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ  ವಿಜಯಕುಮಾರ್ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.