ನವದೆಹಲಿ, ಮಾ 27'ಒಲಿಂಪಿಕ್ ಕ್ರೀಡಾಕೂಟ ಯಾವಾಗ ನಡೆದರೂ ಪದಕ ಗೆದ್ದು ತರುವೆ' ಇದು ಸ್ಟಾರ್ ಬಾಕ್ಸರ್ ಅಮಿತ್ ಪೊಂಘಾಲ್ ಅವರ ಭರವಸೆ ಮಾತುಗಳು. ತಮ್ಮ ಹುಟ್ಟೂರು ರೋಹ್ಟಕ್ ನಲ್ಲಿ ಕೊರೊನಾ ವಿರುದ್ಧದ ಎಲ್ಲ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡು ಅಭ್ಯಾಸ ನಿರತರಾಗಿರುವ ಅಮಿತ್, ವಿಕ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಈ ಮೇಲಿನ ಮಾತನ್ನಾಡಿದ್ದಾರೆ.ಇತ್ತೀಚೆಗೆ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫಿಲಿಪ್ಪಿನ್ಸ್ ನ ಕಾರ್ಲೊ ಪಾಲಮ್ ಅವರನ್ನು ಮಣಿಸಿದ್ದ ಪಂಘಾಲ್, ಪುರುಷರ 52 ಕೆ.ಜಿ. ವಿಭಾಗದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದರು.
ಆದರೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ), ಸದ್ಯ ಟೋಕಿಯೊ ಒಲಿಂಪಿಕ್ ಕೂಟವನ್ನು 2021ಕ್ಕೆ ಮುಂದೂಡಿದೆ. 2018ರ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಪಂಘಾಲ್, ಟೋಕಿಯೊ ಕನಸನ್ನು ಈಡೇರಿಸಿಕೊಳ್ಳಲು ಈಗ ಮತ್ತಷ್ಟು ಸಮಯ ವ್ಯಯಿಸಬೇಕಿದೆ. “ ಒಲಿಂಪಿಕ್ ಈ ವರ್ಷವಾದರೂ ನಡೆಯಲಿ ಅಥವಾ ಮುಂದಿನ ವರ್ಷವಾದರೂ ಜರುಗಲಿ. ಒಲಿಂಪಿಕ್ ನಲ್ಲಿ ಪದಕ ಗೆಲ್ಲುವುದು ನನ್ನ ಕನಸಾಗಿದೆ. ಒಲಿಂಪಿಕ್ ನಲ್ಲಿ ಪದಕ ಗೆಲ್ಲುವ ನನ್ನ ಗುರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಲಿಂಪಿಕ್ಸ್ ನಲ್ಲಿ ನನ್ನ ದೇಶಕ್ಕೆ ಪದಕ ಗೆದ್ದುಕೊಡುವುದು ನನ್ನ ಅಂತಿಮ ಗುರಿಯಾಗಿದೆ,” ಎಂದು ಪಂಘಾಲ್ ಹೇಳಿದ್ದಾರೆ.
“ಪ್ರಸ್ತುತ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಈ ವರ್ಷ ಒಲಿಂಪಿಕ್ಸ್ ಆಯೋಜನೆಗೊಳ್ಳದಿರುವುದಕ್ಕೆ ನಿರಾಸೆಯಾಗಿದೆ. ಏಕೆಂದರೆ, ಇದು ಕೇವಲ ನನಗೊಬ್ಬನಿಗಲ್ಲ. ಏಕೆಂದರೆ ಎಲ್ಲ ಭಾರತೀಯ ಬಾಕ್ಸರ್ ಗಳು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ಆರೋಗ್ಯವೇ ಮೊದಲ ಆದ್ಯತೆಯಾಗಿದೆ. ನಮ್ಮ ಅಭಿಮಾನಿಗಳು, ಕ್ರೀಡಾಪಟುಗಳು ಮತ್ತು ಎಲ್ಲಾ ದೇಶವಾಸಿಗಳ ಆರೋಗ್ಯವು ಕೂಡ ಮೊದಲ ಆದ್ಯತೆಯಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾನು ಗೌರವಿಸುತ್ತೇನೆ, ” ಎಂದು ಭಾರತೀಯ ಬಾಕ್ಸರ್ ಹೇಳಿದ್ದಾರೆ.